ಈ ಬಾರಿಯ ಐಪಿಎಲ್ನಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿದೆ. ಇದಾಗ್ಯೂ ಈ ಪಟ್ಟಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಪೋಟಕ ಬ್ಯಾಟ್ಸ್ಮನ್ ಆಂಡ್ರೆ ರಸೆಲ್ ಅವರ ಹೆಸರು ಕಾಣಿಸಿಕೊಂಡಿರಲಿಲ್ಲ.
ಆದರೆ ಎಸ್ಆರ್ಹೆಚ್ ವಿರುದ್ದದ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ಇದೀಗ 2022 ರ ಐಪಿಎಲ್ನಲ್ಲೂ ಆಂಡ್ರೆ ರಸೆಲ್ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಬೌಲರ್ಗಳ ಬೆಂಡೆತ್ತಿದ ರಸೆಲ್ ಕೇವಲ 28 ಎಸೆತಗಳಲ್ಲಿ 49 ರನ್ ಸಿಡಿಸಿದ್ದರು. ಇದರೊಂದಿಗೆ ವಿರೇಂದ್ರ ಸೆಹ್ವಾಗ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ರಸೆಲ್ ಮುರಿದರು.
ಹೌದು, ಐಪಿಎಲ್ ಇತಿಹಾಸದಲ್ಲೇ ಅತೀ ವೇಗವಾಗಿ 2 ಸಾವಿರ ರನ್ ಪೂರೈಸಿದ ದಾಖಲೆ ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿತ್ತು. ಇದೀಗ ಎಸ್ಆರ್ಹೆಚ್ ವಿರುದ್ದ 49 ರನ್ ಬಾರಿಸುವ ಮೂಲಕ ರಸೆಲ್ ಕೂಡ 2 ಸಾವಿರ ರನ್ ಪೂರೈಸಿದ್ದಾರೆ. ಅದು ಕೂಡ ಅತೀ ವೇಗವಾಗಿ ಎಂಬುದು ವಿಶೇಷ.
ಅಂದರೆ ಸೆಹ್ವಾಗ್ 1211 ಎಸೆತಗಳಲ್ಲಿ 2 ಸಾವಿರ ರನ್ ಬಾರಿಸುವ ಮೂಲಕ ಐಪಿಎಲ್ನಲ್ಲಿ ವಿಶೇಷ ದಾಖಲೆ ಬರೆದಿದ್ದರು. ಆದರೆ ರಸೆಲ್ ಈ ಸಾಧನೆ ಮಾಡಲು ತೆಗೆದುಕೊಂಡಿದ್ದು ಕೇವಲ 1120 ಎಸೆತಗಳನ್ನು ಮಾತ್ರ. ಅಂದರೆ ಕೇವಲ 1220 ಎಸೆತಗಳಲ್ಲಿ 2000 ರನ್ ಪೂರೈಸಿ ಐಪಿಎಲ್ನಲ್ಲಿ ಅತೀ ವೇಗವಾಗಿ 2 ಸಾವಿರ ರನ್ ಬಾರಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಆಂಡ್ರೆ ರಸೆಲ್ ಬರೆದಿದ್ದಾರೆ.
ಇದೀಗ ಐಪಿಎಲ್ನಲ್ಲಿ ವೇಗವಾಗಿ 2 ಸಾವಿರ ರನ್ ಪೂರೈಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಆಂಡ್ರೆ ರಸೆಲ್ (1120 ಎಸೆತ) ಅಗ್ರಸ್ಥಾನದಲ್ಲಿದ್ದರೆ, ವೀರೇಂದ್ರ ಸೆಹ್ವಾಗ್ (1211 ಎಸೆತ) 2ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ಕ್ರಿಸ್ ಗೇಲ್ (1251 ಎಸೆತ) ಮೂರನೇ ಸ್ಥಾನದಲ್ಲಿದ್ದರೆ, ರಿಷಭ್ ಪಂತ್ (1306 ಎಸೆತ) ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ. ಇನ್ನು ಐದನೇ ಸ್ಥಾನದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಇದ್ದು, ಮ್ಯಾಕ್ಸಿ ಐಪಿಎಲ್ನಲ್ಲಿ 2 ಸಾವಿರ ರನ್ ಪೂರೈಸಲು 1309 ಎಸೆತಗಳನ್ನು ಎದುರಿಸಿದ್ದಾರೆ.
Published On - 5:47 pm, Mon, 16 May 22