ಕೊಚ್ಚಿನ್ನಲ್ಲಿ ನಡೆಯುತ್ತಿರುವ ಐಪಿಎಲ್ ಮಿನಿ ಹರಾಜಿನಲ್ಲಿ ಆರ್ಸಿಬಿ ತಂಡವು ಒಟ್ಟು ಮೂವರು ಆಟಗಾರರನ್ನು ಖರೀದಿಸಿದೆ. ಈ ಮೂವರಲ್ಲಿ ಅತ್ಯಧಿಕ ಮೊತ್ತ ಪಡೆದಿರುವುದು ಇಂಗ್ಲೆಂಡ್ನ ಯುವ ಆಲ್ರೌಂಡರ್ ವಿಲ್ ಜಾಕ್ಸ್.
24 ವರ್ಷದ ಯುವ ಆಟಗಾರ ವಿಲ್ ಜಾಕ್ಸ್ ಅವರನ್ನು ಆರ್ಸಿಬಿ ಫ್ರಾಂಚೈಸಿ ಬರೋಬ್ಬರಿ 3.20 ಕೋಟಿ ರೂ. ನೀಡಿ ಖರೀದಿಸಿದೆ. 1.50 ಕೋಟಿ ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡ ಜಾಕ್ಸ್ ಖರೀದಿಗೆ ಹಲವು ಫ್ರಾಂಚೈಸಿಗಳು ಆಸಕ್ತಿ ತೋರಿಸಿದ್ದವು.
ಪರಿಣಾಮ 1.50 ಕೋಟಿಯಿಂದ ಶುರುವಾದ ಹರಾಜು ಮೂರು ಕೋಟಿ ರೂ. ಮೊತ್ತವನ್ನು ದಾಟಿತು. ಇದಾಗ್ಯೂ ಯುವ ಆಟಗಾರನ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿದ ಆರ್ಸಿಬಿ ಫ್ರಾಂಚೈಸಿಯು ಅಂತಿಮವಾಗಿ 3.20 ಕೋಟಿ ರೂ. ನೀಡಿ ವಿಲ್ ಜಾಕ್ಸ್ ಅವರನ್ನು ತಮ್ಮದಾಗಿಸಿಕೊಂಡಿತು.
ಇಂಗ್ಲೆಂಡ್ ಪರ ಕೇವಲ 2 ಟಿ20 ಪಂದ್ಯವಾಡಿರುವ ವಿಲ್ ಜಾಕ್ಸ್ ಕೇವಲ 40 ರನ್ ಕಲೆಹಾಕಿದ್ದಾರೆ. ಆದರೆ ಹಲವು ಟಿ20 ಲೀಗ್ಗಳಲ್ಲಿ 95 ಇನಿಂಗ್ಸ್ ಆಡಿರುವ ಜಾಕ್ಸ್ 20 ಅರ್ಧಶತಕ ಹಾಗೂ 1 ಶತಕದೊಂದಿಗೆ 2532 ರನ್ ಬಾರಿಸಿದ್ದಾರೆ. ಹಾಗೆಯೇ 23 ವಿಕೆಟ್ ಕಬಳಿಸಿ ಬೌಲಿಂಗ್ನಲ್ಲೂ ಕೊಡುಗೆ ನೀಡಿದ್ದಾರೆ. ಹೀಗಾಗಿಯೇ ಆರ್ಸಿಬಿ ಫ್ರಾಂಚೈಸಿ 3.20 ಕೋಟಿ ನೀಡಿ ಇಂಗ್ಲೆಂಡ್ನ ಯುವ ಆಟಗಾರನನ್ನು ಖರೀದಿಸಿದೆ.
ವಿಲ್ ಜಾಕ್ಸ್ ಖರೀದಿಯೊಂದಿಗೆ ಆರ್ಸಿಬಿ ತಂಡದಲ್ಲಿರುವ ಆಟಗಾರರ ಸಂಖ್ಯೆ 21 ಕ್ಕೇರಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ವೇಗಿ ರೀಸ್ ಟೋಪ್ಲಿ ಹಾಗೂ ಭಾರತದ ಹಿಮಾಂಶು ಶರ್ಮಾ ಅವರನ್ನು ಆರ್ಸಿಬಿ ಖರೀದಿಸಿತ್ತು. ಅದರಂತೆ ಆರ್ಸಿಬಿ ಪ್ರಸ್ತುತ ತಂಡ ಈ ಕೆಳಗಿನಂತಿದೆ...
ಆರ್ಸಿಬಿ ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೋಮ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಝಲ್‌ವುಡ್, ಸಿದ್ಧಾರ್ಥ್ ಕೌಲ್, ಆಕಾಶ್ ದೀಪ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ವಿಲ್ ಜಾಕ್ಸ್.
Published On - 6:29 pm, Fri, 23 December 22