Updated on: May 18, 2023 | 11:05 PM
IPL 2023: ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ಪರ ಹೆನ್ರಿಕ್ ಕ್ಲಾಸೆನ್ ಕೇವಲ 51 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 8 ಫೋರ್ನೊಂದಿಗೆ ಸಿಡಿಲಬ್ಬರದ 104 ರನ್ ಬಾರಿಸಿದ್ದರು. ಈ ಸ್ಪೋಟಕ ಶತಕದ ನೆರವಿನಿಂದ ಎಸ್ಆರ್ಹೆಚ್ ತಂಡವು 5 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿತು.
187 ರನ್ಗಳ ಬೃಹತ್ ಟಾರ್ಗೆಟ್ ಪಡೆದ ಆರ್ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಸ್ಪೋಟಕ ಆರಂಭ ಒದಗಿಸಿದ್ದರು. ಅದರಲ್ಲೂ ಮೊದಲ ಓವರ್ನಿಂದಲೇ ಅಬ್ಬರಿಸಲಾರಂಭಿಸಿದ ಕೊಹ್ಲಿ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದರು.
ಅತ್ತ ಉತ್ತಮ ಸಾಥ್ ನೀಡಿದ ಡುಪ್ಲೆಸಿಸ್ ಕೂಡ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 5ನೇ ಓವರ್ನಲ್ಲೇ ಆರ್ಸಿಬಿ ತಂಡದ ಮೊತ್ತ 50 ರ ಗಡಿದಾಟಿತು. ಅಲ್ಲದೆ ಪವರ್ಪ್ಲೇ ಮುಕ್ತಾಯದ ವೇಳೆಗೆ ಬರೊಬ್ಬರಿ 64 ರನ್ ಚಚ್ಚಿದರು.
ಈ ಅರ್ಧಶತಕದ ಜೊತೆಯಾಟದೊಂದಿಗೆ ಐಪಿಎಲ್ನಲ್ಲಿ ಆರ್ಸಿಬಿ ಪರ ಒಂದೇ ಸೀಸನ್ನಲ್ಲಿ ಅತೀ ಹೆಚ್ಚು ಬಾರಿ ಅರ್ಧಶತಕದ ಜೊತೆಯಾಟವಾಡಿದ ಆರಂಭಿಕ ಜೋಡಿ ಎಂಬ ಹೊಸ ದಾಖಲೆಯೊಂದು ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಪಾಲಾಗಿದೆ.
ಕಿಂಗ್ ಕೊಹ್ಲಿ ಹಾಗೂ ಡೇಂಜರಸ್ ಡುಪ್ಲೆಸಿಸ್ ಈ ಬಾರಿಯ ಐಪಿಎಲ್ನಲ್ಲಿ 7 ಬಾರಿ ಮೊದಲ ವಿಕೆಟ್ಗೆ 50+ ರನ್ಗಳ ಜೊತೆಯಾಟವಾಡಿದ್ದಾರೆ. ಈ ಮೂಲಕ ಐಪಿಎಲ್ನ ಹಳೆಯ ದಾಖಲೆಯನ್ನು ಕೂಡ ಸರಿಗಟ್ಟಿದ್ದಾರೆ.
ಐಪಿಎಲ್ನಲ್ಲಿ ಒಂದೇ ಸೀಸನ್ನಲ್ಲಿ ಅತೀ ಹೆಚ್ಚು ಬಾರಿ 50+ ಸ್ಕೋರ್ಗಳ ಜೊತೆಯಾಟವಾಡಿದ ಆರಂಭಿಕ ಜೋಡಿ ದಾಖಲೆ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್ಸ್ಟೋವ್ ಹೆಸರಿನಲ್ಲಿದೆ. 2019 ರಲ್ಲಿ ಎಸ್ಆರ್ಹೆಚ್ ಪರ ಆಡಿದ್ದ ಈ ಜೋಡಿಯು ಒಟ್ಟು 7 ಬಾರಿ 50+ ರನ್ಗಳ ಜೊತೆಯಾಟವಾಡಿದ್ದರು.
ಇದೀಗ ಈ ದಾಖಲೆಯನ್ನು ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಸರಿಗಟ್ಟಿದ್ದಾರೆ. ಅಲ್ಲದೆ ಮುಂದಿನ ಪಂದ್ಯದಲ್ಲಿ ಮತ್ತೊಂದು ಅರ್ಧಶತಕದ ಜೊತೆಯಾಟವಾಡಿದರೆ ಐಪಿಎಲ್ನಲ್ಲಿ ಹೊಸ ದಾಖಲೆಯೊಂದು ನಿರ್ಮಾಣವಾಗಲಿದೆ.