Updated on:May 29, 2023 | 3:41 PM
IPL 2023 Final CSK vs GT: ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಐಪಿಎಲ್ನ ಫೈನಲ್ ಪಂದ್ಯವು ಇಂದು (ಮೆ 29) ಜರುಗಲಿದೆ. ಮಳೆಯ ಕಾರಣ ಮೀಸಲು ದಿನಕ್ಕೆ ಮುಂದೂಡಲ್ಪಟ್ಟ ಪಂದ್ಯಕ್ಕೆ ಮತ್ತೆ ವರುಣನ ಭೀತಿ ಎದುರಾಗಿದೆ.
ಏಕೆಂದರೆ ಹವಮಾನ ವರದಿ ಪ್ರಕಾರ ಸೋಮವಾರ ಕೂಡ ಅಹಮದಾಬಾದ್ನ ಸುತ್ತ ಮುತ್ತ ಮೋಡ ಕವಿದ ವಾತವರಣವಿದ್ದು, ಹೀಗಾಗಿ ಮಳೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಇಂದು ಕೂಡ ಮಳೆ ಬಂದರೆ ಫಲಿತಾಂಶ ನಿರ್ಧರಿಸುವುದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕಾಗಿ ಬಿಸಿಸಿಐ ಕೆಲ ನಿಯಮಗಳನ್ನು ರೂಪಿಸಿದೆ.
ಈ ನಿಯಮಗಳಲ್ಲಿ ಸೂಪರ್ ಓವರ್ ಕೂಡ ಇರುವುದು ವಿಶೇಷ. ಅಂದರೆ ನಿಗದಿತ ಸಮಯದೊಳಗೆ ಪಂದ್ಯವನ್ನು ನಡೆಸಲು ಸಾಧ್ಯವಾಗದಿದ್ದರೆ ಸೂಪರ್ ಓವರ್ ಪಂದ್ಯ ನಡೆಯುವುದು ಖಚಿತ. ಆದರೆ ಅದಕ್ಕೂ ಮುನ್ನ ಇತರೆ ಆಯ್ಕೆಗಳನ್ನು ಪರಿಶೀಲಿಸಲಿದೆ. ಈ ಆಯ್ಕೆಗಳೆಂದರೆ...
ಪಂದ್ಯ ಆರಂಭಕ್ಕೂ ಮುನ್ನ ಮಳೆ ಬಂದರೆ ಅಥವಾ ಆರಂಭದ ಬಳಿಕ ಮಳೆ ಬಂದು ವಿಳಂಬವಾದರೆ ಸಂಪೂರ್ಣ ಓವರ್ಗಳ ಪಂದ್ಯಗಳನ್ನು ನಡೆಸಲಾಗುತ್ತದೆ. ಇಲ್ಲಿ ಓವರ್ಗಳ ಕಡಿತಕ್ಕೆ ಕಟ್ ಆಫ್ ಟೈಮ್ ರಾತ್ರಿ 9.40. ಅಂದರೆ ರಾತ್ರಿ 9.40 ರೊಳಗೆ ಶುರುವಾದರೆ ಯಾವುದೇ ಓವರ್ ಕಡಿತ ಇರುವುದಿಲ್ಲ. 2 ತಂಡಗಳು 20 ಓವರ್ಗಳನ್ನು ಆಡಲಿದೆ.
ಇನ್ನು ರಾತ್ರಿ 9.40 ರ ಬಳಿಕ ಪಂದ್ಯ ಆರಂಭವಾಗುವುದಾರೆ, ಓವರ್ಗಳನ್ನು ಕಡಿತ ಮಾಡಲಾಗುತ್ತದೆ. ಇನ್ನು ಉಭಯ ತಂಡಗಳ ಇನಿಂಗ್ಸ್ ನಡುವೆ ಮಳೆ ಬಂದು ನಿಂತರೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರದ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಇಲ್ಲಿ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಬೇಕಿದ್ದರೆ ಉಭಯ ತಂಡಗಳು ಕನಿಷ್ಠ 5 ಓವರ್ಗಳನ್ನು ಆಡಿರಬೇಕು ಎಂಬ ನಿಯಮ ರೂಪಿಸಲಾಗಿದೆ.
ಇನ್ನು 7.30 ರಿಂದ 11.56 ರೊಳಗೆ ಪಂದ್ಯವನ್ನು ನಡೆಸಲು ಸಾಧ್ಯವಾಗದಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ 5 ಓವರ್ಗಳ ಪಂದ್ಯವನ್ನು ಆಯೋಜಿಸಲು ಮುಂದಾಗಲಿದೆ. ಈ 5 ಓವರ್ಗಳ ಪಂದ್ಯವು ರಾತ್ರಿ 12.06 ರಿಂದ ಶುರುವಾಗಲಿದೆ.
ಒಂದು ವೇಳೆ ರಾತ್ರಿ 12.06 ರಿಂದ 12.50 ರೊಳಗೆ 5 ಓವರ್ಗಳ ಪಂದ್ಯ ಆಯೋಜಿಸಲು ಕೂಡ ಸಾಧ್ಯವಾಗದಿದ್ದರೆ ಸೂಪರ್ ಓವರ್ ಮೊರೆ ಹೋಗಲಾಗುತ್ತದೆ. ಇಲ್ಲಿ ಸೂಪರ್ ಓವರ್ ನಡೆಸಲು ಪಿಚ್ ಸಿದ್ಧವಿದೆಯಾ ಎಂಬುದನ್ನು ಮುಖ್ಯವಾಗಿ ಪರಿಗಣನೆ ತೆಗೆದುಕೊಳ್ಳಲಾಗುತ್ತದೆ.
ಈ ಬಗ್ಗೆ ಉಭಯ ತಂಡಗಳ ನಾಯಕರುಗಳೊಂದಿಗೆ ಚರ್ಚಿಸಿದ ಬಳಿಕ ಅಂಪೈರ್ ಸೂಪರ್ ಓವರ್ ನಡೆಸಲು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ ಸೂಪರ್ ಓವರ್ ನಡೆಸಲು ಕೂಡ ಸಾಧ್ಯವಾಗದಿದ್ದರೆ ಗುಜರಾತ್ ಟೈಟಾನ್ಸ್ ತಂಡ ಚಾಂಪಿಯನ್ ಆಗಲಿದೆ.
ಏಕೆಂದರೆ ಮೀಸಲು ದಿನದಂದು ಕನಿಷ್ಠ ಸೂಪರ್ ಓವರ್ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ, ಲೀಗ್ ಹಂತದ 70 ಪಂದ್ಯಗಳ ಬಳಿಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.
ಲೀಗ್ ಹಂತದ ಪಂದ್ಯಗಳ ಮುಕ್ತಾಯದ ವೇಳೆಗೆ ಅಂಕಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ಅಗ್ರಸ್ಥಾನ ಅಲಂಕರಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ ದ್ವಿತೀಯ ಸ್ಥಾನ ಅಲಂಕರಿಸಿತ್ತು. ಹೀಗಾಗಿ ಇಂದು ಕೂಡ ಪಂದ್ಯ ನಡೆದಿದ್ದರೆ ಹಾರ್ದಿಕ್ ಪಾಂಡ್ಯ ಪಡೆಯನ್ನು ಚಾಂಪಿಯನ್ಸ್ ಎಂದು ಪರಿಗಣಿಸಲಾಗುತ್ತದೆ.
Published On - 3:30 pm, Mon, 29 May 23