- Kannada News Photo gallery Cricket photos Kannada News - IPL 2023: How many times Punjab Kings qualified for playoffs?
IPL 2023: ಕೇವಲ 2 ಬಾರಿ: ಕಿಂಗ್ಸ್ ಇಲೆವೆನ್ ‘ಪಂಜಾಬ್’ ಕಿಂಗ್ಸ್ ಆದ್ರೂ ಬದಲಾಗಿಲ್ಲ ಅದೃಷ್ಟ..!
IPL 2023 Kannada: ಚೊಚ್ಚಲ ಸೀಸನ್ನಲ್ಲಿ ಯುವರಾಜ್ ಸಿಂಗ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ 14 ಪಂದ್ಯಗಳಲ್ಲಿ 10 ಜಯ ಸಾಧಿಸಿ 20 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನ ಅಲಂಕರಿಸಿತ್ತು.
Updated on: May 20, 2023 | 5:29 PM

IPL 2023: 16 ಸೀಸನ್ ಐಪಿಎಲ್ನಲ್ಲಿ 2 ಬಾರಿ ಮಾತ್ರ ಪ್ಲೇಆಫ್ ಆಡಿದ ತಂಡ ಒಂದೆಡೆಯಾದರೆ, ಮತ್ತೊಂದೆಡೆ ಒಂದು ತಂಡವು 2 ಐಪಿಎಲ್ ಆವೃತ್ತಿಯಲ್ಲಿ 2 ಬಾರಿ ಪ್ಲೇಆಫ್ ಪ್ರವೇಶಿಸಿದೆ.

ಹೌದು, ಗುಜರಾತ್ ಟೈಟಾನ್ಸ್ ತಂಡವು ಎರಡೂ ಸೀಸನ್ಗಳಲ್ಲಿ ಪ್ಲೇಆಫ್ ಪ್ರವೇಶಿಸಿದರೆ, ಕಳೆದ 16 ಸೀಸನ್ಗಳಿಂದ ಐಪಿಎಲ್ ಆಡುತ್ತಿರುವ ಪಂಜಾಬ್ ಕಿಂಗ್ಸ್ ಇದುವರೆಗೆ ಪ್ಲೇಆಫ್ ಪ್ರವೇಶಿಸಿದ್ದು ಕೇವಲ 2 ಬಾರಿ ಮಾತ್ರ.

2008 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹೆಸರಿನೊಂದಿಗೆ ಐಪಿಎಲ್ ಅಭಿಮಾನ ಆರಂಭಿಸಿದ್ದ ಬಾಲಿವುಡ್ ನಟಿ ಪ್ರೀತಿ ಝಿಂಟಾ ಮಾಲೀಕತ್ವದ ಪಂಜಾಬ್ ತಂಡವು ಮೊದಲ ಸೀಸನ್ನಲ್ಲೇ ಪ್ಲೇಆಫ್ಗೆ ಪ್ರವೇಶಿಸಿತ್ತು.

ಚೊಚ್ಚಲ ಸೀಸನ್ನಲ್ಲಿ ಯುವರಾಜ್ ಸಿಂಗ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ 14 ಪಂದ್ಯಗಳಲ್ಲಿ 10 ಜಯ ಸಾಧಿಸಿ 20 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನ ಅಲಂಕರಿಸಿತ್ತು.

ನಾಕೌಟ್ ಮಾದರಿಯಲ್ಲಿ ನಡೆದಿದ್ದ ಅಂದಿನ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಸಿಎಸ್ಕೆ 2ನೇ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಿತ್ತು. ಆದರೆ ಸೆಮೀಸ್ನಲ್ಲಿ ಸಿಎಸ್ಕೆ ವಿರುದ್ಧ ಸೋತು ಕಿಂಗ್ಸ್ ಇಲೆವೆನ್ ಪಂಜಾಬ್ ಫೈನಲ್ ಪ್ರವೇಶಿಸುವ ಅವಕಾಶವನ್ನು ಕೈಚೆಲ್ಲಿಕೊಂಡಿತು.

ಇದಾದ ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ಪ್ಲೇಆಫ್ ಪ್ರವೇಶಿಸಿದ್ದು 2014 ರಲ್ಲಿ. ಜಾರ್ಜ್ ಬೈಲಿ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಲೀಗ್ ಹಂತದಲ್ಲಿ 14 ಪಂದ್ಯಗಳಲ್ಲಿ 11 ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ಮೂಲಕ ಪ್ಲೇಆಫ್ ಪ್ರವೇಶಿಸಿತ್ತು.

ಅಂದು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋತ ಕಿಂಗ್ಸ್ ಇಲೆವೆನ್ ಪಂಜಾಬ್, ಆ ಬಳಿಕ 2ನೇ ಕ್ವಾಲಿಫೈಯರ್ನಲ್ಲಿ ಸಿಎಸ್ಕೆಗೆ ಸೋಲುಣಿಸಿ ಫೈನಲ್ ಪ್ರವೇಶಿಸಿತ್ತು. ಆದರೆ ಚೊಚ್ಚಲ ಫೈನಲ್ ಪಂದ್ಯದಲ್ಲಿ ಕೆಕೆಆರ್ ವಿರುದ್ದ 3 ವಿಕೆಟ್ಗಳಿಂದ ಸೋಲುವ ಮೂಲಕ ಕಿಂಗ್ಸ್ ಇಲೆವೆನ್ ಪಂಜಾಬ್ ಕಪ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿಕೊಂಡಿತು.

ಇದಾದ ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ಪ್ಲೇಆಫ್ಗೆ ಪ್ರವೇಶಿಸಿಲ್ಲ. ಇದರ ನಡುವೆ ಘಟಾನುಘಟಿ ಆಟಗಾರರನ್ನೇ ಕರೆ ತಂದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ಗೆ ಅಗ್ರ-4 ರಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ಸಾಧ್ಯವಾಗಿಲ್ಲ.

ಈ ಬಾರಿ ಕೂಡ ಕೇವಲ 6 ಪಂದ್ಯಗಳಲ್ಲಿ ಜಯ ಸಾಧಿಸಿ 12 ಅಂಕಗಳೊಂದಿಗೆ ಐಪಿಎಲ್ ಅಭಿಯಾನ ಅಂತ್ಯಗೊಳಿಸಿದೆ. ಅಂದರೆ 2021 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹೆಸರನ್ನು ಪಂಜಾಬ್ ಕಿಂಗ್ಸ್ ಆಗಿ ಬದಲಿಸಿದರೂ ಅದೃಷ್ಟ ಮಾತ್ರ ಕೈ ಹಿಡಿಯುತ್ತಿಲ್ಲ ಎಂಬುದೇ ಸತ್ಯ.














