ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 6 ವಿಕೆಟ್ಗಳಿಂದ ಮಣಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಟೂರ್ನಿಯಲ್ಲಿ 6ನೇ ಗೆಲುವು ದಾಖಲಿಸಿದೆ. ಇದರೊಂದಿಗೆ ಚೆನ್ನೈ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ.
ಇದರೊಂದಿಗೆ ತಾನು ಕೂಡ ಪ್ಲೇ ಆಫ್ ಹಾದಿಯನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ ಈ ಪಂದ್ಯದಲ್ಲಿ ಐಪಿಎಲ್ ನಿಯಮವನ್ನು ಉಲ್ಲಂಘಿಸಿದಕ್ಕಾಗಿ ಕೆಕೆಆರ್ ನಾಯಕ ನಿತೀಶ್ ರಾಣಾಗೆ ಮಂಡಳಿ ಭಾರಿ ದಂಡ ವಿಧಿಸಿದೆ.
ಕೆಕೆಆರ್ ನಾಯಕ ರಾಣಾ ಅವರು ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧದ ಪಂದ್ಯದ ವೇಳೆ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಐಪಿಎಲ್‌ನಿಂದ ದಂಡನೆಗೆ ಒಳಗಾಗಿದ್ದು, ಪಂದ್ಯ ಶುಲ್ಕ 24 ಲಕ್ಷ ರೂ.ಗಳನ್ನು ದಂಡವಾಗಿ ಪಾವತಿಸಬೇಕಾಗಿದೆ.
ವಾಸ್ತವವಾಗಿ ಐಪಿಎಲ್ನ ನೀತಿ ಸಂಹಿತೆಯ ಅಡಿಯಲ್ಲಿ ಇದು ಅವರ ತಂಡದ ಎರಡನೇ ಅಪರಾಧವಾಗಿರುವುದರಿಂದ ರಾಣಾ ಅವರಿಗೆ ರೂ. 24 ಲಕ್ಷ ದಂಡ ವಿಧಿಸಲಾಗಿದ್ದು, ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡ ಸೇರಿಕೊಂಡಿದ್ದ ಆಟಗಾರ ಸೇರಿದಂತೆ ತಂಡದ ಪ್ರತಿಯೊಬ್ಬ ಸದಸ್ಯನಿಗೆ ರೂ. 6 ಲಕ್ಷ ಅಥವಾ ಪಂದ್ಯದ ಶುಲ್ಕದ ಶೇಕಡಾ 25ರಷ್ಟನ್ನು ದಂಡವಾಗಿ ವಿಧಿಸಲಾಗಿದೆ.
ಇನ್ನು ಇದೇ ರಾಣಾ ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಹೃತಿಕ್ ಶೋಕೀನ್ ವಿರುದ್ಧ ಅಸಭ್ಯ ಪದ ಬಳಕೆ ಮಾಡಿದಕ್ಕಾಗಿ ದಂಡನೆ ಒಳಗಾಗಿದ್ದರು. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.21 ರ ಅಡಿಯಲ್ಲಿ ರಾಣಾ ಲೆವೆಲ್ 1 ಅಪರಾಧವನ್ನು ಒಪ್ಪಿಕೊಂಡಿದ್ದರಿಂದ ಆ ಸಮಯದಲ್ಲಿ ಅವರ ಪಂದ್ಯದ ಶುಲ್ಕದ 25 ಪ್ರತಿಶತ ದಂಡ ವಿಧಿಸಲಾಗಿತ್ತು.
ಪಂದ್ಯದ ಕುರಿತು ಮಾತನಾಡುವುದಾದರೆ, ಕೆಕೆಆರ್ ನಾಯಕ ರಾಣಾ 43 ಎಸೆತಗಳಲ್ಲಿ 54 ರನ್ ಗಳಿಸಿದರೆ, ರಿಂಕು ಅರ್ಧಶತಕ (57*) ಗಳಿಸಿದರು. ಈ ಇಬ್ಬರ ಆಟದಿಂದಾಗಿ ಕೆಕೆಆರ್ ಬಲಿಷ್ಠ ಚೆನ್ನೈ ತಂಡವನ್ನು ಮಣಿಸಿತು.
Published On - 5:21 pm, Mon, 15 May 23