Rashid Khan: ಹ್ಯಾಟ್ರಿಕ್ ವಿಕೆಟ್ ಉರುಳಿಸಿ ವಿಶ್ವ ದಾಖಲೆ ಬರೆದ ರಶೀದ್ ಖಾನ್
IPL 2023 Kannada: ಈ ಹ್ಯಾಟ್ರಿಕ್ ವಿಕೆಟ್ ಹೊರತಾಗಿಯೂ ಗುಜರಾತ್ ಟೈಟಾನ್ಸ್ ತಂಡವು ಈ ಪಂದ್ಯದಲ್ಲಿ ಸೋತಿರುವುದು ವಿಶೇಷ. ಈ ಪಂದ್ಯದ ಕೊನೆಯ ಓವರ್ನಲ್ಲಿ ಕೆಕೆಆರ್ಗೆ ಗೆಲ್ಲಲು 29 ರನ್ಗಳ ಅವಶ್ಯಕತೆಯಿತ್ತು.
Updated on: Apr 09, 2023 | 8:30 PM

IPL 2023 Rashid Khan Hat-Trick: ಅಹಮದಾಬಾದ್ನಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಶೀದ್ ಖಾನ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿರುವುದು ವಿಶೇಷ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್ ಕಲೆಹಾಕಿತ್ತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಕೆಕೆಆರ್ ಪರ ವೆಂಕಟೇಶ್ ಅಯ್ಯರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೇವಲ 40 ಎಸೆತಗಳಲ್ಲಿ 5 ಸಿಕ್ಸ್ ಹಾಗು 8 ಫೋರ್ನೊಂದಿಗೆ ವೆಂಕಟೇಶ್ ಅಯ್ಯರ್ 83 ರನ್ಗಳಿಸಿ ಔಟಾಗಿದ್ದರು.

ಈ ಹಂತದಲ್ಲಿ ಕೆಕೆಆರ್ ತಂಡಕ್ಕೆ ಗೆಲ್ಲಲು 4 ಓವರ್ಗಳಲ್ಲಿ 50 ರನ್ಗಳ ಗುರಿಯಿತ್ತು. ಆದರೆ 17ನೇ ಓವರ್ ಎಸೆದ ರಶೀದ್ ಖಾನ್ ಮೊದಲ ಎಸೆತದಲ್ಲೇ ಆ್ಯಂಡ್ರೆ ರಸೆಲ್ (1) ಅವರ ವಿಕೆಟ್ ಪಡೆದರು. ಇನ್ನು ಮರು ಎಸೆತದಲ್ಲೇ ಸುನಿಲ್ ನರೈಲ್ (0) ಕ್ಯಾಚ್ ನೀಡಿ ನಿರ್ಗಮಿಸಿದರು.

ಆ ಬಳಿಕ ಬಂದ ಶಾರ್ದೂಲ್ ಠಾಕೂರ್ (0) ಅವರನ್ನು ಎಲ್ಬಿ ಬಲೆಗೆ ಬೀಳಿಸುವ ಮೂಲಕ ರಶೀದ್ ಖಾನ್ ಹ್ಯಾಟ್ರಿಕ್ ಸಾಧನೆ ಮಾಡಿದರು.

ವಿಶೇಷ ಎಂದರೆ ಇದು ರಶೀದ್ ಖಾನ್ ಅವರ ಮೊದಲ ಐಪಿಎಲ್ ಹ್ಯಾಟ್ರಿಕ್ ವಿಕೆಟ್. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಅಫ್ಘಾನಿಸ್ತಾನ್ ಬೌಲರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಹ್ಯಾಟ್ರಿಕ್ ವಿಕೆಟ್ ಪಡೆದ ವಿಶ್ವ ದಾಖಲೆಯನ್ನು ಕೂಡ ನಿರ್ಮಿಸಿದ್ದಾರೆ.

ರಶೀದ್ ಖಾನ್ ಇದಕ್ಕೂ ಮುನ್ನ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು. ಅಲ್ಲದೆ ಕೆರಿಬಿಯನ್ ಪ್ರೀಮಿಯರ್ ಲೀಗ್, ಬಿಗ್ ಬ್ಯಾಷ್ ಲೀಗ್ನಲ್ಲೂ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದರು.

ಇದೀಗ ಐಪಿಎಲ್ನಲ್ಲೂ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಟಿ20 ಕ್ರಿಕೆಟ್ನಲ್ಲಿ 4 ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಈ ಮೂಲಕ ರಶೀದ್ ಖಾನ್ ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಈ ಹ್ಯಾಟ್ರಿಕ್ ವಿಕೆಟ್ ಹೊರತಾಗಿಯೂ ಗುಜರಾತ್ ಟೈಟಾನ್ಸ್ ತಂಡವು ಈ ಪಂದ್ಯದಲ್ಲಿ ಸೋತಿರುವುದು ವಿಶೇಷ. ಈ ಪಂದ್ಯದ ಕೊನೆಯ ಓವರ್ನಲ್ಲಿ ಕೆಕೆಆರ್ಗೆ ಗೆಲ್ಲಲು 29 ರನ್ಗಳ ಅವಶ್ಯಕತೆಯಿತ್ತು. ಯಶ್ ದಯಾಳ್ ಎಸೆದ ಅಂತಿಮ ಓವರ್ನಲ್ಲಿ 5 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ರಿಂಕು ಸಿಂಗ್ ಕೆಕೆಆರ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
























