- Kannada News Photo gallery Cricket photos Kannada News | IPL 2023: Virat Kohli Century Records In IPL
Virat Kohli: ಕಿಂಗ್ ಕೊಹ್ಲಿಯ ಸಿಡಿಲಬ್ಬರದ ಸೆಂಚುರಿಗೆ ಹಳೆಯ ದಾಖಲೆಗಳು ಧೂಳೀಪಟ
Virat Kohli Records: ಆರ್ಸಿಬಿ ಪರ ಒಂದೇ ಸೀಸನ್ನಲ್ಲಿ ಅತೀ ಹೆಚ್ಚು ಬಾರಿ ಅರ್ಧಶತಕದ ಜೊತೆಯಾಟವಾಡಿದ ಆರಂಭಿಕ ಜೋಡಿ ಎಂಬ ಹೊಸ ದಾಖಲೆಯೊಂದು ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಪಾಲಾಗಿದೆ.
Updated on: May 18, 2023 | 11:52 PM

IPL 2023: ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 65ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಕ್ಷರಶಃ ಅಬ್ಬರಿಸಿದ್ದಾರೆ. ಅದು ಅಂತಿಂಥ ಅಬ್ಬರವಲ್ಲ ಸೆಂಚುರಿಯ ಸಿಡಿಲಬ್ಬರ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್ಆರ್ಹೆಚ್ ತಂಡವು 186 ರನ್ಗಳಿಸಿ ಆರ್ಸಿಬಿಗೆ ಬೃಹತ್ ಟಾರ್ಗೆಟ್ ನೀಡಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.

ಪವರ್ಪ್ಲೇನಲ್ಲಿ 64 ರನ್ ಬಾರಿಸಿದ ಈ ಜೋಡಿ 12ನೇ ಓವರ್ ವೇಳೆಗೆ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಅಲ್ಲದೆ ಇಬ್ಬರೂ ಕೂಡ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಈ ಅರ್ಧಶತಕದ ಬಳಿಕ ವಿರಾಟ್ ಕೊಹ್ಲಿಯ ಸಿಡಿಲಬ್ಬರ ಶುರುವಾಯಿತು. ಎಸ್ಆರ್ಹೆಚ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಕಿಂಗ್ ಕೊಹ್ಲಿ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳನ್ನು ಸಿಡಿಸಿದರು.

ಅಲ್ಲದೆ 94 ರನ್ಗಳಿಸಿದ್ದ ವೇಳೆ ಭುವನೇಶ್ವರ್ ಕುಮಾರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಕೇವಲ 62 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಶತಕದೊಂದಿಗೆ ಐಪಿಎಲ್ನಲ್ಲಿ ಹಲವು ದಾಖಲೆಯನ್ನು ಕಿಂಗ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ.

ಹೌದು, ಇದು ಐಪಿಎಲ್ನಲ್ಲಿನ ವಿರಾಟ್ ಕೊಹ್ಲಿ 6ನೇ ಶತಕ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕಿಂಗ್ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಅಗ್ರಸ್ಥಾನದಲ್ಲಿ ಕ್ರಿಸ್ ಗೇಲ್ ಇದ್ದರು. ಗೇಲ್ ಒಟ್ಟು 6 ಶತಕ ಬಾರಿಸಿದ್ದರೂ, ಸದ್ಯ ಸಕ್ರೀಯರಾಗಿರುವ ಕಿಂಗ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಇನ್ನು ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಶತಕ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಕಿಂಗ್ ಕೊಹ್ಲಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಹಾಗೆಯೇ ಈ ಶತಕದೊಂದಿಗೆ ಐಪಿಎಲ್ನಲ್ಲಿ 7500 ರನ್ ಕೂಡ ಪೂರೈಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ 7 ಸಾವಿರದ ಐನೂರು ರನ್ ಕಲೆಹಾಕಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಕಿಂಗ್ ಕೊಹ್ಲಿ ಪಾತ್ರರಾಗಿದ್ದಾರೆ.

ಇದಲ್ಲದೆ ಆರ್ಸಿಬಿ ಪರ ಒಂದೇ ಸೀಸನ್ನಲ್ಲಿ ಅತೀ ಹೆಚ್ಚು ಬಾರಿ ಅರ್ಧಶತಕದ ಜೊತೆಯಾಟವಾಡಿದ ಆರಂಭಿಕ ಜೋಡಿ ಎಂಬ ಹೊಸ ದಾಖಲೆಯೊಂದು ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಪಾಲಾಗಿದೆ.

ಕಿಂಗ್ ಕೊಹ್ಲಿ ಹಾಗೂ ಡೇಂಜರಸ್ ಡುಪ್ಲೆಸಿಸ್ ಈ ಬಾರಿಯ ಐಪಿಎಲ್ನಲ್ಲಿ 7 ಬಾರಿ ಮೊದಲ ವಿಕೆಟ್ಗೆ 50+ ರನ್ಗಳ ಜೊತೆಯಾಟವಾಡಿದ್ದಾರೆ.

ಹಾಗೆಯೇ ಆರ್ಸಿಬಿ ಪರ ಅತ್ಯಧಿಕ ಬಾರಿ ಶತಕದ ಜೊತೆಯಾಟವಾಡಿದ ಆರಂಭಿಕ ಜೋಡಿಯಾಗಿ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಗುರುತಿಸಿಕೊಂಡಿದ್ದಾರೆ. ಅದು ಕೂಡ ತನ್ನದೇ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ

ಈ ಹಿಂದೆ ಆರ್ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ಹಾಗೂ ಕ್ರಿಸ್ ಗೇಲ್ ಜೋಡಿ ಒಟ್ಟು 4 ಬಾರಿ ಶತಕದ ಜೊತೆಯಾಟವಾಡಿದ್ದರು. ಇದೀಗ ಫಾಫ್ ಡುಪ್ಲೆಸಿಸ್ ಜೊತೆಗೂಡಿ ಕಿಂಗ್ ಕೊಹ್ಲಿ ಈ ದಾಖಲೆಯನ್ನು ಸರಿಗಟ್ಟಿರುವುದು ವಿಶೇಷ.



















