Updated on: May 08, 2023 | 6:22 PM
IPL 2023: ಐಪಿಎಲ್ನ 51ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿತ್ತು. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು.
ತಂಡದ ಪರ ಆರಂಭಿಕ ಆಟಗಾರ ವೃದ್ಧಿಮಾನ್ ಸಾಹ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 43 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 10 ಫೋರ್ನೊಂದಿಗೆ 81 ರನ್ ಬಾರಿಸಿ ಸಾಹ ಔಟಾಗಿದ್ದರು.
ವೃದ್ಧಿಮಾನ್ ಸಾಹ ಅವರ ಈ ಭರ್ಜರಿ ಬ್ಯಾಟಿಂಗ್ ಅನ್ನು ಆರ್ಸಿಬಿ ಆಟಗಾರ ವಿರಾಟ್ ಕೊಹ್ಲಿ ಹಾಡಿ ಹೊಗಳಿರುವುದು ವಿಶೇಷ. ಸಾಹ ಅವರ ಈ ಜಬರ್ದಸ್ತ್ ಬ್ಯಾಟಿಂಗ್ ಅನ್ನು ವೀಕ್ಷಿಸಿದ ಕೊಹ್ಲಿ, ವಾಟ್ ಎ ಪ್ಲೇಯರ್ ಎಂದು ಚಪ್ಪಾಳೆ ತಟ್ಟುವ ಇಮೋಜಿಯೊಂದಿಗೆ ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದಾರೆ.
ಇದಾದ ಬಳಿಕ ಇದೇ ಪಂದ್ಯದಲ್ಲಿ ರಶೀದ್ ಖಾನ್ ಹಿಡಿದ ಅದ್ಭುತ ಕ್ಯಾಚ್ಗೂ ಸಹ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಇನಿಂಗ್ಸ್ನ 9ನೇ ಓವರ್ನ ಮೊದಲ ಎಸೆತವನ್ನು ಕೈಲ್ ಮೇಯರ್ಸ್ ಲೆಗ್ ಸೈಡ್ನತ್ತ ಬಾರಿಸಿದರು. ಆದರೆ ಬೌಂಡರಿ ಲೈನ್ನಿಂದ ಶರವೇಗದಲ್ಲಿ ಓಡಿ ಬಂದ ರಶೀದ್ ಖಾನ್ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದರು.
ಈ ಅತ್ಯದ್ಭುತ ಕ್ಯಾಚ್ ವೀಕ್ಷಿಸಿದ ವಿರಾಟ್ ಕೊಹ್ಲಿ ವಿಸ್ಮಿತರಾಗಿದ್ದಾರೆ. ನಾನು ನೋಡಿದ ಅತ್ಯುತ್ತಮ ಕ್ಯಾಚ್‌ಗಳಲ್ಲಿ ಇದು ಕೂಡ ಒಂದು. ಬ್ರಿಲಿಯಂಟ್ಎಂದು ರಶೀದ್ ಖಾನ್ ಫೀಲ್ಡಿಂಗ್ ಅನ್ನು ಕಿಂಗ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಹಾಡಿ ಹೊಗಳಿದ್ದಾರೆ.
ಇದೀಗ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಆಟಗಾರರನ್ನು ಕಿಂಗ್ ಕೊಹ್ಲಿ ಹಾಡಿಹೊಗಳಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಲಕ್ನೋ ವಿರುದ್ಧದ ಗೆಲುವನ್ನು ಗುಜರಾತ್ ಟೈಟಾನ್ಸ್ಗಿಂತ ಕಿಂಗ್ ಕೊಹ್ಲಿ ಸಂಭ್ರಮಿಸಿರಬೇಕು ಎಂದು ಟ್ರೋಲ್ ಮಾಡಲಾಗುತ್ತಿದೆ.
ಅಂದಹಾಗೆ ಕೆಲ ದಿನಗಳ ಹಿಂದೆ ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಆರ್ಸಿಬಿ ನಡುವಣ ಪಂದ್ಯದ ಬಳಿಕ ಆಟಗಾರರ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಅದರಲ್ಲೂ ವಿರಾಟ್ ಕೊಹ್ಲಿ ಹಾಗೂ ಲಕ್ನೋ ತಂಡದ ಕೈಲ್ ಮೇಯರ್ಸ್, ನವೀನ್ ಉಲ್ ಹಕ್, ಗೌತಮ್ ಗಂಭೀರ್ ಮೈದಾನದಲ್ಲಿ ಮಾತಿನ ಮೂಲಕ ಕಿತ್ತಾಡಿಕೊಂಡಿದ್ದರು. ಇದೀಗ ಲಕ್ನೋ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಗುಜರಾತ್ ಟೈಟಾನ್ಸ್ ಆಟಗಾರರನ್ನು ಕೊಹ್ಲಿ ಹೊಗಳಿರುವುದು ವಿಶೇಷ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 227 ರನ್ ಕಲೆಹಾಕಿತ್ತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 7 ವಿಕೆಟ್ ನಷ್ಟಕ್ಕೆ 171 ರನ್ಗಳಿಸಿ 56 ರನ್ಗಳಿಂದ ಸೋಲೋಪ್ಪಿಕೊಂಡಿತು.