
ಇಂಡಿಯನ್ ಪ್ರೀಮಿಯರ್ ಲೀಗ್ನ ಹೊಸ ಸೀಸನ್ ರಂಗೇರಲು ಇನ್ನೇನು ಗಂಟೆಗಳು ಮಾತ್ರ ಉಳಿದಿವೆ. ಅತ್ತ ಎಲ್ಲಾ ತಂಡಗಳ ನಾಯಕರುಗಳು ಈಗಾಗಲೇ ಉದ್ಘಾಟನಾ ಸಮಾರಂಭಕ್ಕಾಗಿ ಅಹಮದಾಬಾದ್ಗೆ ಬಂದಿಳಿದಿದ್ದಾರೆ. ಅಷ್ಟೇ ಅಲ್ಲದೆ ಐಪಿಎಲ್ ಟ್ರೋಫಿಯೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ಆದರೆ ಐಪಿಎಲ್ ಟ್ರೋಫಿಯೊಂದಿಗಿನ ನಾಯಕರುಗಳ ಫೋಟೋಶೂಟ್ಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಗೈರಾಗಿದ್ದರು. ಇದರ ಬೆನ್ನಲ್ಲೇ ಹಿಟ್ಮ್ಯಾನ್ ಕಾಣಿಸಿಕೊಳ್ಳದಿರುವ ಬಗ್ಗೆ ನಾನಾ ಪ್ರಶ್ನೆಗಳು ಹುಟ್ಟಿಕೊಂಡಿತ್ತು. ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರಕಿದೆ.

ಗುರುವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ನಾಯಕರುಗಳ ಫೋಟೋಶೂಟ್ಗೆ ರೋಹಿತ್ ಶರ್ಮಾ ಆಗಮಿಸಿರಲಿಲ್ಲ. ಅನಾರೋಗ್ಯದ ಹಿನ್ನಲೆ ಹಿಟ್ಮ್ಯಾನ್ಗೆ ಅಹಮದಾಬಾದ್ನತ್ತ ಪ್ರಯಾಣಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಉಳಿದ 9 ನಾಯಕರುಗಳ ಜೊತೆ ಫೋಟೋಶೂಟ್ ಮಾಡಲಾಗಿದೆ.

ಸದ್ಯ ರೋಹಿತ್ ಶರ್ಮಾ ಅವರ ಆರೋಗ್ಯದಲ್ಲಿ ಚೇತರಿಕೆಯಾಗುತ್ತಿದ್ದು, ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಅವರು ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಈ ಫೋಟೋ ಶೂಟ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕನ ಸ್ಥಾನದಲ್ಲಿ ಭುವನೇಶ್ವರ್ ಕುಮಾರ್ ಕಾಣಿಸಿಕೊಂಡಿದ್ದರು. ಎಸ್ಆರ್ಹೆಚ್ ತಂಡದ ಹೊಸ ನಾಯಕ ಐಡೆನ್ ಮಾರ್ಕ್ರಾಮ್ ಸೌತ್ ಆಫ್ರಿಕಾ ಹಾಗೂ ನೆದರ್ಲ್ಯಾಂಡ್ಸ್ ನಡುವಣ ಏಕದಿನ ಸರಣಿ ಆಡುತ್ತಿದ್ದಾರೆ. ಹೀಗಾಗಿ ಅವರು ಸಹ ಐಪಿಎಲ್ ಆರಂಭಕ್ಕೂ ಮುನ್ನ ಭಾರತಕ್ಕೆ ಆಗಮಿಸಲು ಸಾಧ್ಯವಾಗಿಲ್ಲ.

ಅಲ್ಲದೆ ಏಪ್ರಿಲ್ 2 ರಂದು ನಡೆಯಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಐಡೆನ್ ಮಾರ್ಕ್ರಾಮ್ ಅಲಭ್ಯರಾಗಿದ್ದಾರೆ. ಹೀಗಾಗಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಹಂಗಾಮಿ ನಾಯಕನಾಗಿ ಭುವನೇಶ್ವರ್ ಕುಮಾರ್ ಅವರನ್ನು ಆಯ್ಕೆ ಮಾಡಿದೆ. ಇದೇ ಕಾರಣದಿಂದಾಗಿ ಭುವಿ ಐಪಿಎಲ್ ಕ್ಯಾಪ್ಟನ್ಸ್ ಫೋಟೋಶೂಟ್ನಲ್ಲಿ ಕಾಣಿಸಿಕೊಂಡಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಇಂದಿನಿಂದ (ಮಾ.31) ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ.