- Kannada News Photo gallery Cricket photos IPL 2024 CSK start training camp ahead of IPL 2024 see pics
IPL 2024: ಸಮರಾಭ್ಯಾಸ ಶುರು ಮಾಡಿದ ಸಿಎಸ್ಕೆ, ಚೆನ್ನೈಗೆ ಬಂದಿಳಿದ ಆಟಗಾರರು; ಧೋನಿ ಮಿಸ್ಸಿಂಗ್
IPL 2024: ಮುಂಬರುವ ಟೂರ್ನಿಗೆ ಇಂದಿನಿಂದಲೇ ಅಭ್ಯಾಸ ಶುರು ಮಾಡಿರುವ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಚೆನ್ನೈನಲ್ಲಿ ವಿಶೇಷ ಶಿಬಿರ ಆಯೋಜಿಸಿದೆ. ಶುಕ್ರವಾರ ಕೆಲವು ಆಟಗಾರರು ಈ ಶಿಬಿರಕ್ಕೆ ಆಗಮಿಸಿದ್ದಾರೆ.
Updated on: Mar 02, 2024 | 5:14 PM

17ನೇ ಆವೃತ್ತಿಯ ಐಪಿಎಲ್ ಇದೇ ತಿಂಗಳ ಮಾರ್ಚ್ 22 ರಿಂದ ಪ್ರಾರಂಭವಾಗುತ್ತದೆ. ಟೂರ್ನಿಯ ಮೊದಲ ಪಂದ್ಯ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಈ ಪಂದ್ಯಕ್ಕೆ ಮೂರು ವಾರಗಳಿಗಿಂತ ಕಡಿಮೆ ಸಮಯ ಉಳಿದಿದೆ.

ಹೀಗಾಗಿ ಮುಂಬರುವ ಟೂರ್ನಿಗೆ ಇಂದಿನಿಂದಲೇ ಅಭ್ಯಾಸ ಶುರು ಮಾಡಿರುವ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಚೆನ್ನೈನಲ್ಲಿ ವಿಶೇಷ ಶಿಬಿರ ಆಯೋಜಿಸಿದೆ. ಶುಕ್ರವಾರ ಕೆಲವು ಆಟಗಾರರು ಈ ಶಿಬಿರಕ್ಕೆ ಆಗಮಿಸಿದ್ದಾರೆ. ಪಿಟಿಐ ಇನ್‌ಪುಟ್ ಪ್ರಕಾರ, ಎಂಎಸ್ ಧೋನಿ ಯಾವಾಗ ಆಗಮಿಸುತ್ತಾರೆ ಎಂಬುದರ ಕುರಿತು ಯಾವುದೇ ದೃಢೀಕರಣವಿಲ್ಲ ಎಂದು ತಿಳಿದುಬಂದಿದೆ.

ನಿನ್ನೆಯಿಂದ ಆರಂಭವಾಗಿರುವ ಶಿಬಿರ ಇಂದು ಕೂಡ ಮುಂದುವರೆದಿದ್ದು, ಅದರಲ್ಲಿ ಸ್ಟಾರ್ ವೇಗಿ ದೀಪಕ್ ಚಹಾರ್ ಕೂಡ ಕಾಣಿಸಿಕೊಂಡರು. ಭಾರತೀಯ ಆಟಗಾರರ ಮೊದಲ ಬ್ಯಾಚ್ ಶುಕ್ರವಾರ ಶಿಬಿರವನ್ನು ತಲುಪಿದೆ ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದರು.

ಅಲ್ಲದೆ ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಆಟಗಾರರು ಶಿಬಿರಕ್ಕೆ ಆಗಮಿಸಲಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ ಮುಖೇಶ್ ಚೌಧರಿ, ಸಿಮರ್ಜೀತ್ ಸಿಂಗ್, ರಾಜವರ್ಧನ್ ಹಂಗರ್ಗೇಕರ್, ಪ್ರಶಾಂತ್ ಸೋಲಂಕಿ, ಅಜಯ್ ಮಂಡಲ್ ಮತ್ತು ದೀಪಕ್ ಚಹಾರ್ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ಈ ಶಿಬಿರದಲ್ಲಿ ಎಲ್ಲರ ಕಣ್ಣು ದೀಪಕ್ ಚಹಾರ್ ಮೇಲಿರಲಿದೆ. ಏಕೆಂದರೆ ನಿರಂತರವಾಗಿ ಗಾಯಗಳಿಂದ ಬಸವಳಿದಿರುವ ಚಹಾರ್, ಡಿಸೆಂಬರ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಮಧ್ಯದಲ್ಲಿಯೇ ತೊರೆದು ತಮ್ಮ ತಂದೆಯ ಆರೋಗ್ಯದ ಕಾರಣ ತವರಿಗೆ ವಾಪಸ್ಸಾಗಿದ್ದರು.

ಇದಾದ ಬಳಿಕ ಮತ್ತೆ ಗಾಯಗೊಂಡಿದ್ದ ಚಹಾರ್, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ರಿಹ್ಯಾಬ್ಗೆ ಒಳಗಾಗಿದ್ದರು. ಪ್ರಸ್ತುತ ಫಿಟ್ ಆಗಿರುವ ಅವರು ಐಪಿಎಲ್‌ನಲ್ಲಿ ಅಬ್ಬರಿಸಲು ತಯಾರಿ ಶುರು ಮಾಡಿದ್ದಾರೆ. ಈ ಮೂಲಕ 2024 ರ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಇರಾದೆಯೂ ಚಹಾರ್ಗಿದೆ.

ಭಾರತದ ಆಟಗಾರರು ಶಿಬಿರದಲ್ಲಿ ಕಾಣಸಿಕೊಂಡರೂ, ತಂಡದ ನಾಯಕ ಧೋನಿ ಮಾತ್ರ ಇನ್ನು ಚೆನ್ನೈ ತಲುಪಿಲ್ಲ. ಪ್ರಸ್ತುತ ಧೋನಿ ಯಾವಾಗ ಈ ಶಿಬಿರಕ್ಕೆ ಸೇರುತ್ತಾರೆ ಎಂಬುದರ ಕುರಿತು ಯಾವುದೇ ಖಚಿತವಾದ ಸುದ್ದಿ ಇನ್ನೂ ಬಂದಿಲ್ಲ ಎಂದು ಪಿಟಿಐ ತನ್ನ ಮಾಹಿತಿಯಲ್ಲಿ ತಿಳಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ವೇಳಾಪಟ್ಟಿ: ಮಾರ್ಚ್ 22 ರಂದು ಆರ್ಸಿಬಿ ತಂಡವನ್ನು ಎದುರಿಸಲಿರುವ ಸಿಎಸ್ಕೆ, ಮಾರ್ಚ್ 26 ರಂದು ಗುಜರಾತ್ ಟೈಟಾನ್ಸ್, ಮಾರ್ಚ್ 31 ರಂದು ದೆಹಲಿ ಕ್ಯಾಪಿಟಲ್ಸ್, ಹಾಗೂ ಏಪ್ರಿಲ್ 5 ರಂದು ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೆಣಸಾಡಲಿದೆ.




