- Kannada News Photo gallery Cricket photos IPL 2024 Hardik Pandya suffering from mental health issues says Robin Uthappa
IPL 2024: ‘ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಹಾರ್ದಿಕ್ ಪಾಂಡ್ಯ’; ಕನ್ನಡಿಗನ ಅಚ್ಚರಿಯ ಹೇಳಿಕೆ
IPL 2024: ಒತ್ತಡದಲ್ಲಿರುವ ಪಾಂಡ್ಯ ಬಗ್ಗೆ ಮಾತನಾಡಿರುವ ಕರ್ನಾಟಕದ ಅನುಭವಿ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಹಾರ್ದಿಕ್ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಹಾರ್ದಿಕ್ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
Updated on: Apr 20, 2024 | 9:25 PM

17ನೇ ಆವೃತ್ತಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ತಂಡ ಸತತ ಸೋಲುಗಳಿಂದ ಕಂಗೆಟ್ಟಿತ್ತು. ಆದರೀಗ ಗೆಲುವಿನ ಟ್ರ್ಯಾಕ್ಗೆ ಮರಳಿರುವ ಹಾರ್ದಿಕ್ ಪಡೆ ಮತ್ತೊಂದು ಕಪ್ಗಾಗಿ ಹೋರಾಟ ನೀಡುತ್ತಿದೆ. ಅದಾಗ್ಯೂ ತಂಡದ ನಾಯಕ ಹಾರ್ದಿಕ್ ವಿರುದ್ಧ ಟೀಕೆಗಳು ನಿಲ್ಲುತ್ತಿಲ್ಲ.

ಹಾರ್ದಿಕ್ ಪಾಂಡ್ಯ ಮುಂಬೈ ತಂಡಕ್ಕೆ ಬಂದಾಗಿನಿಂದಲೂ ಒಂದಲ್ಲೊಂದು ಟೀಕೆಗಳಿಂದ ಸದಾ ಸುದ್ದಿಯಲ್ಲಿದ್ದಾರೆ. ಮೊದಲು ನಾಯಕತ್ವ ಪಡೆದ ವಿಚಾರದಲ್ಲಿ ನಿಂದನೆಗೊಳಗಾಗಿದ್ದ ಹಾರ್ದಿಕ್, ಆ ಬಳಿಕ ತಂಡದ ಸತತ ಸೋಲುಗಳಿಗೆ ಹೊಣೆಗಾರರಾಗಿ ಟೀಕೆಗೆ ಒಳಗಾಗಬೇಕಾಯಿತು.

ಹೀಗಾಗಿ ಸತತವಾಗಿ ನಿಂದನೆಗೊಳಗಾಗುತ್ತಿರುವ ಪಾಂಡ್ಯ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಆಟದತ್ತ ಗಮನ ಕೊಡುತ್ತಿದ್ದಾರೆ. ಅದಾಗ್ಯೂ ನಿರಂತರವಾಗಿ ನಿಂದನೆ ಹಾಗೂ ಟ್ರೋಲಿಂಗ್ಗೆ ಒಳಗಾಗುತ್ತಿರುವ ಪಾಂಡ್ಯ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎಂಬುದು ಅಷ್ಟೇ ಸತ್ಯ.

ಇದೀಗ ಒತ್ತಡದಲ್ಲಿರುವ ಪಾಂಡ್ಯ ಬಗ್ಗೆ ಮಾತನಾಡಿರುವ ಕರ್ನಾಟಕದ ಅನುಭವಿ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಹಾರ್ದಿಕ್ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಹಾರ್ದಿಕ್ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಯೂಟ್ಯೂಬ್ ಚಾನೆಲ್‌ನಲ್ಲಿ ಹಾರ್ದಿಕ್ ಅವರ ಮಾನಸಿಕ ಸ್ಥಿತಿಯ ಬಗ್ಗೆ ಮಾತನಾಡಿದ ರಾಬಿನ್ ಉತ್ತಪ್ಪ, ಹಾರ್ದಿಕ್ ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ತನ್ನ ವಿರುದ್ಧ ನಡೆಯುತ್ತಿರುವ ಸಂಗತಿಗಳಿಂದ ಅವರಿಗೆ ನೋವಾಗುವುದಿಲ್ಲವೇ? ಹಾರ್ದಿಕ್ ಖಂಡಿತವಾಗಿಯೂ ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ ಎಂದು ಉತ್ತಪ್ಪ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಉತ್ತಪ್ಪ, ಭಾರತೀಯ ಅಭಿಮಾನಿಗಳ ಭಾವನೆಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ, ಆದರೆ ಯಾವುದೇ ಆಟಗಾರನೊಂದಿಗಿನ ಈ ರೀತಿಯ ನಡವಳಿಕೆಯನ್ನು ಸರಿ ಎಂದು ಕರೆಯಲಾಗುವುದಿಲ್ಲ. ಈ ರೀತಿಯ ವರ್ತನೆ ನಿಜಕ್ಕೂ ಅಸಭ್ಯವಾಗಿದೆ. ನಾವು ಯಾರೊಂದಿಗೂ ಈ ರೀತಿ ವರ್ತಿಸಬಾರದು. ನಾವು ಇದನ್ನು ನೋಡಿ ನಗಬಾರದು ಮತ್ತು ಅದನ್ನು ಯಾವುದೇ ರೀತಿಯಲ್ಲಿ ಮುಂದಕ್ಕೆ ಕೊಂಡೊಯ್ಯಬಾರದು ಎಂದಿದ್ದಾರೆ.




