- Kannada News Photo gallery Cricket photos IPL 2024 Final: which does not feature any of CSK,MI or RCB
IPL 2024 Final: RCB, CSK, MI ಇಲ್ಲದ ಮೂರನೇ ಫೈನಲ್
IPL 2024 Final KKR vs SRH: ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಈವರೆಗೆ 27 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಕೆಕೆಆರ್ ತಂಡ 18 ಬಾರಿ ಜಯ ಸಾಧಿಸಿದರೆ, ಎಸ್ಆರ್ಹೆಚ್ ತಂಡ ಗೆದ್ದಿರುವುದು ಕೇವಲ 9 ಬಾರಿ ಮಾತ್ರ. ಅದರಲ್ಲೂ ಈ ಸಲ ಆಡಲಾದ ಎರಡೂ ಪಂದ್ಯಗಳಲ್ಲೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗೆಲುವು ಸಾಧಿಸಿತ್ತು.
Updated on: May 26, 2024 | 2:31 PM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ 17ನೇ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ (ಮೇ 26) ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ.

ವಿಶೇಷ ಎಂದರೆ ಈ ಬಾರಿಯ ಫೈನಲ್ನಲ್ಲೂ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಅಥವಾ ರಾಯಲ್ ಚಾಲೆಂಜರ್ಸ್ ತಂಡಗಳು ಕಾಣಿಸಿಕೊಳ್ಳುತ್ತಿಲ್ಲ. ಅಂದರೆ ಕಳೆದ 16 ಸೀಸನ್ ಐಪಿಎಲ್ ಫೈನಲ್ನಲ್ಲಿ 14 ಬಾರಿ ಮೂರು ತಂಡಗಳಲ್ಲಿ ಒಂದು ತಂಡ ಫೈನಲ್ನಲ್ಲಿ ಕಾಣಿಸಿಕೊಂಡಿತ್ತು.

ಆದರೆ 2014 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ಫೈನಲ್ಗೇರುವ ಮೂಲಕ ಈ ಸಾಂಪ್ರದಾಯಕ್ಕೆ ಇತಿಶ್ರೀ ಹಾಡಿದ್ದರು. ಇದಾದ ಬಳಿಕ 2022 ರಲ್ಲಿ ಸಿಎಸ್ಕೆ, ಮುಂಬೈ ಇಂಡಿಯನ್ಸ್ ಮತ್ತು ಆರ್ಸಿಬಿ ತಂಡಗಳನ್ನು ಹಿಂದಿಕ್ಕಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಫೈನಲ್ ಆಡಿತ್ತು.

ಇದೀಗ ಮೂರನೇ ಬಾರಿ ಆರ್ಸಿಬಿ, ಸಿಎಸ್ಕೆ ಅಥವಾ ಮುಂಬೈ ಇಂಡಿಯನ್ಸ್... ಈ ಮೂರು ತಂಡಗಳಲ್ಲಿ ಒಂದು ತಂಡ ಕೂಡ ಇಲ್ಲದೆ ಫೈನಲ್ ಪಂದ್ಯ ನಡೆಯುತ್ತಿದೆ. ಆದರೆ ಈ ಬಾರಿ ಕೂಡ ಗೆಲ್ಲುವುದು ಹಳೆಯ ಚಾಂಪಿಯನ್ಗಳು ಎಂಬುದು ವಿಶೇಷ.

ಅಂದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 2012 ರಲ್ಲಿ ಮತ್ತು 2014 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನು ಹೈದರಾಬಾದ್ ಫ್ರಾಂಚೈಸಿಯು 2009 ರಲ್ಲಿ ಡೆಕ್ಕನ್ ಚಾರ್ಜರ್ಸ್ ಹೆಸರಿನಲ್ಲಿ ಚಾಂಪಿಯನ್ ಪಟ್ಟಕ್ಕೇರಿದರೆ, 2016 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಕಿರೀಟ ಮುಡಿಗೇರಿಸಿಕೊಂಡಿತು. ಹೀಗಾಗಿ ಈ ಬಾರಿ ಗೆಲ್ಲುವ ತಂಡ ಮೂರನೇ ಬಾರಿ ಟ್ರೋಫಿ ಎತ್ತಿ ಹಿಡಿಯಲಿದೆ. ಹೀಗಾಗಿ ಹಳೆಯ ಚಾಂಪಿಯನ್ಸ್ ತಂಡಗಳೇ ಈ ಬಾರಿ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಲಿದೆ.




