IPL 2024: ಕ್ರಿಕೆಟ್ ಅಂಗಳದಲ್ಲಿ ಕಿಂಗ್ ಕೊಹ್ಲಿಯಂದೇ ಜನಪ್ರಿಯರಾಗಿರುವ ವಿರಾಟ್ ಕೊಹ್ಲಿ (Virat Kohli) ಐಪಿಎಲ್ ಸೀಸನ್ 17 ಗಾಗಿ ಸಜ್ಜಾಗುತ್ತಿದ್ದಾರೆ. ಈ ಸಿದ್ಧತೆಗಳ ನಡುವೆ ಮಂಗಳವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್ಸಿಬಿ ತಂಡದ ಅನ್ಬಾಕ್ಸ್ ಕಾರ್ಯಕ್ರಮದಲ್ಲಿ ಕಿಂಗ್ ಕೊಹ್ಲಿ ಮಿಂಚಿದ್ದರು.
ಆರ್ಸಿಬಿ ತಂಡದ ಜೆರ್ಸಿ ಬಿಡುಗಡೆ, ಮಹಿಳಾ ತಂಡಕ್ಕೆ ಸನ್ಮಾನ ಸೇರಿದಂತೆ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ವಿಶೇಷ ಮನವಿಯೊಂದನ್ನು ಸಲ್ಲಿಸಿದ್ದರು. ಆ ಮನವಿಯೇ... ಇನ್ಮುಂದೆ ನನ್ನನ್ನು ಕಿಂಗ್ ಕೊಹ್ಲಿ ಎಂದು ಕರೆಯಬೇಡಿ ಎಂಬುದು.
ಆರ್ಸಿಬಿ ಅನ್ಬಾಕ್ಸ್ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಕಾಣಿಸಿಕೊಂಡ ದ್ಯಾನಿಶ್ ಸೇಠ್ ವಿರಾಟ್ ಕೊಹ್ಲಿಯನ್ನು ಕಿಂಗ್ ಎಂದು ಸಂಬೋಧಿಸಿದರು. ಈ ವೇಳೆ ಆ ರೀತಿಯಾಗಿ ಕರೆಯಬೇಡಿ ಎಂದ ಕೊಹ್ಲಿ, ಆ ಥರ ಕರೆಯುವುದರಿಂದ ನನಗೆ ಮುಜುಗರವಾಗುತ್ತದೆ ಎಂದು ತಿಳಿಸಿದರು. ಅಲ್ಲದೆ ಯಾರು ಸಹ ಕಿಂಗ್ ಎಂದು ಕರೆಯಬೇಡಿ ಎಂದು ವಿರಾಟ್ ಕೊಹ್ಲಿ ಮನವಿ ಮಾಡಿದರು.
ಆದರೆ ವಿರಾಟ್ ಕೊಹ್ಲಿಯ ಈ ಮನವಿಗೆ ಅಭಿಮಾನಿಗಳು ಕಿಂಗ್ ಕೊಹ್ಲಿಯ ಘೋಷಣೆಯೊಂದಿಗೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವಂತೆ ಉತ್ತರ ನೀಡಿದ್ದರು. ಏಕೆಂದರೆ ವಿರಾಟ್ ಕೊಹ್ಲಿಯನ್ನು ಈಗಾಗಲೇ ಅಭಿಮಾನಿಗಳು ಕ್ರಿಕೆಟ್ನ ಕಿಂಗ್ ಎಂದು ಪರಿಗಣಿಸಿದ್ದಾರೆ. ಇದಕ್ಕೆ ಸಾಕ್ಷಿಯೇ ಅವರ ದಾಖಲೆಗಳು.
ಇದಾಗ್ಯೂ ಖುದ್ದು ವಿರಾಟ್ ಕೊಹ್ಲಿ, ಕಿಂಗ್ ಎಂದು ಕರೆಯಬೇಡಿ ಎಂದಿರುವುದು ಅವರ ಸಜ್ಜನಿಕೆ. ಆದರೆ ನಮಗೆ ಯಾವತ್ತಿದ್ದರೂ ಕೊಹ್ಲಿಯೇ ಕಿಂಗ್. ಹೀಗಾಗಿ ಕಿಂಗ್ ಕೊಹ್ಲಿ ಹೆಸರು ಮುಂದುವರೆಯಲಿದೆ ಎಂಬ ವಾದವನ್ನು ಅಭಿಮಾನಿಗಳು ಮುಂದಿಟ್ಟಿದ್ದಾರೆ.
ಹೀಗಾಗಿ ವಿರಾಟ್ ಕೊಹ್ಲಿಯ ಮನವಿಯನ್ನು ಅಭಿಮಾನಿಗಳು ಒಪ್ಪುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಅಲ್ಲದೆ ಕೊಹ್ಲಿಯನ್ನು ಕಿಂಗ್ ಪಟ್ಟದಿಂದ ಕೆಳಗಿಳಿಸುವ ಲಕ್ಷಣಗಳು ಸಹ ಗೋಚರಿಸುತ್ತಿಲ್ಲ. ಹಾಗಾಗಿ ಕ್ರಿಕೆಟ್ ಅಂಗಳದ ಕಿಂಗ್ ಆಗಿ ವಿರಾಟ್ ಕೊಹ್ಲಿ ಮುಂದುವರೆಯಲಿದ್ದಾರೆ ಎಂದೇ ಹೇಳಬಹುದು.