
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17ರ 8ನೇ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಅದು ಕೂಡ 11 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿ ಹೊಸ ಇತಿಹಾಸ ನಿರ್ಮಿಸುವ ಮೂಲಕ ಎಂಬುದು ವಿಶೇಷ. ಅಂದರೆ ಐಪಿಎಲ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಇದೀಗ ಸನ್ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದೆ.

ಇದಕ್ಕೂ ಮುನ್ನ ಈ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿತ್ತು. 2013 ರಲ್ಲಿ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡವು ಕ್ರಿಸ್ ಗೇಲ್ (175) ಅವರ ಶತಕದ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 263 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ಇದೀಗ 11 ವರ್ಷಗಳ ಹಳೆಯ ದಾಖಲೆಯನ್ನು ಧೂಳೀಪಟ ಮಾಡಿ ಸನ್ರೈಸರ್ಸ್ ಹೈದರಾಬಾದ್ ಹೊಸ ಇತಿಹಾಸ ನಿರ್ಮಿಸಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಎಸ್ಆರ್ಹೆಚ್ ತಂಡವು 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 277 ರನ್ ಬಾರಿಸಿ ನೂತನ ದಾಖಲೆ ಬರೆದಿಟ್ಟಿದ್ದಾರೆ.

ಈ ದಾಖಲೆಯ ನಡುವೆ ಆರ್ಸಿಬಿ ತಂಡದ ಹೆಸರಿನಲ್ಲಿದ್ದ ಒಂದು ದಾಖಲೆ ಸೇಫ್ ಆಗಿ ಉಳಿದಿರುವುದು ವಿಶೇಷ. ಅಂದರೆ ಐಪಿಎಲ್ ಇತಿಹಾಸದಲ್ಲಿ ಅತೀ ವೇಗವಾಗಿ 200 ರನ್ ಕಲೆಹಾಕಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿಯೇ ಉಳಿದುಕೊಂಡಿದೆ.

2013 ರಲ್ಲಿ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ 14.1 ಓವರ್ಗಳಲ್ಲಿ 200 ರನ್ ಪೂರೈಸಿ ದಾಖಲೆ ನಿರ್ಮಿಸಿತ್ತು. ಇದೀಗ ಸನ್ರೈಸರ್ಸ್ ಹೈದರಾಬಾದ್ 277 ರನ್ ಬಾರಿಸಿದರೂ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.

ಅಂದರೆ ಮುಂಬೈ ಇಂಡಿಯನ್ಸ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರೂ ಸನ್ರೈಸರ್ಸ್ ಹೈದರಾಬಾದ್ ತಂಡವು 200 ರನ್ಗಳನ್ನು ಪೂರೈಸಲು 14.4 ಓವರ್ಗಳನ್ನು ತೆಗೆದುಕೊಂಡಿದೆ. ಈ ಮೂಲಕ ಹೆಚ್ಚುವರಿ 3 ಎಸೆತಗಳಿಂದ ಆರ್ಸಿಬಿ ಹೆಸರಿನಲ್ಲಿರುವ ವಿಶೇಷ ದಾಖಲೆಯನ್ನು ಅಳಿಸಿ ಹಾಕುವ ಅವಕಾಶ ಕೈತಪ್ಪಿಸಿಕೊಂಡಿದೆ.

ಒಟ್ಟಿನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಸನ್ರೈಸರ್ಸ್ ಹೈದರಾಬಾದ್ ಈ ಬಾರಿಯ ಐಪಿಎಲ್ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಈ ಸಂಚಲನ ಮುಂಬರುವ ಪಂದ್ಯಗಳಲ್ಲೂ ಮುಂದುವರೆಯಲಿದೆಯಾ ಕಾದು ನೋಡಬೇಕಿದೆ.