ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 8ನೇ ಪಂದ್ಯದಲ್ಲಿ ದಾಖಲೆಗಳ ಮೇಲೆ ದಾಖಲೆಗಳು ನಿರ್ಮಾಣವಾಗಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಈ ಪಂದ್ಯದಲ್ಲಿ ದಾಖಲೆಯಾದ ಒಟ್ಟು ದಾಖಲೆಗಳ ಸಂಖ್ಯೆ 20 ಎಂದರೆ ನಂಬಲೇಬೇಕು. ಆ ದಾಖಲೆಗಳಾವುವು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ...
ಅತ್ಯಧಿಕ ಸ್ಕೋರ್: ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಸನ್ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದೆ. ಈ ಪಂದ್ಯದಲ್ಲಿ 277 ರನ್ ಸಿಡಿಸುವ ಮೂಲಕ ಆರ್ಸಿಬಿ ತಂಡದ ಹೆಸರಿನಲ್ಲಿದ್ದ 263 ರನ್ಗಳ ದಾಖಲೆಯನ್ನು ಎಸ್ಆರ್ಹೆಚ್ ಮುರಿದಿದೆ.
ಗರಿಷ್ಠ ಮೊತ್ತ: ಸನ್ರೈಸರ್ಸ್ ಹೈದರಾಬಾದ್ ತಂಡವು 277 ರನ್ ಬಾರಿಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಮೂರನೇ ಗರಿಷ್ಠ ಸ್ಕೋರ್ ಕಲೆಹಾಕಿದ ವಿಶೇಷ ದಾಖಲೆ ಬರೆದಿದೆ. ಈ ಪಟ್ಟಿಯಲ್ಲಿ ಮಂಗೋಲಿಯಾ ವಿರುದ್ಧ 314 ರನ್ ಬಾರಿಸಿದ ನೇಪಾಳ ತಂಡ ಅಗ್ರಸ್ಥಾನದಲ್ಲಿದೆ.
ಫ್ರಾಂಚೈಸಿಯ ಗರಿಷ್ಠ ಸ್ಕೋರ್: ಟಿ20 ಲೀಗ್ ಕ್ರಿಕೆಟ್ನಲ್ಲಿ ದಾಖಲಾದ ಅತ್ಯಧಿಕ ಸ್ಕೋರ್ ಎಂಬ ದಾಖಲೆ ಕೂಡ ಸನ್ರೈಸರ್ಸ್ ಹೈದರಾಬಾದ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿತ್ತು.
ಅತ್ಯಧಿಕ ಸಿಕ್ಸ್: ಈ ಪಂದ್ಯದಲ್ಲಿ ಒಟ್ಟು 38 ಸಿಕ್ಸ್ಗಳು ಮೂಡಿಬಂದಿದ್ದವು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆಯನ್ನು ಎಸ್ಆರ್ಹೆಚ್ - ಮುಂಬೈ ಬ್ಯಾಟರ್ಗಳು ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ 33 ಸಿಕ್ಸ್ ಬಾರಿಸಿದ್ದ ಆರ್ಸಿಬಿ-ಸಿಎಸ್ಕೆ ಹೆಸರಿನಲ್ಲಿತ್ತು.
ಎಸ್ಆರ್ಹೆಚ್ ದಾಖಲೆ: 277 ರನ್ ಬಾರಿಸುವ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡವು ತನ್ನ ಗರಿಷ್ಠ ಮೊತ್ತವನ್ನು ಕಲೆಹಾಕಿದೆ. ಇದಕ್ಕೂ ಮುನ್ನ 231 ರನ್ ಬಾರಿಸಿದ್ದು ದಾಖಲೆಯಾಗಿತ್ತು.
ಟಿ20 ವಿಶ್ವ ದಾಖಲೆ: ಸನ್ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ಬ್ಯಾಟರ್ಗಳು ಒಟ್ಟು 38 ಸಿಕ್ಸ್ ಸಿಡಿಸುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ವಿಶ್ವ ದಾಖಲೆಯನ್ನೂ ಕೂಡ ನಿರ್ಮಿಸಿದ್ದಾರೆ.
ಉಭಯ ತಂಡಗಳ ಗರಿಷ್ಠ ಸ್ಕೋರ್: ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ 277 ರನ್ ಬಾರಿಸಿದರೆ, ಮುಂಬೈ ಇಂಡಿಯನ್ಸ್ 246 ರನ್ ಕಲೆಹಾಕಿತು. ಈ ಮೂಲಕ ಐಪಿಎಲ್ ಪಂದ್ಯವೊಂದರಲ್ಲಿ 523 ರನ್ ಕಲೆಹಾಕಿ ವಿಶೇಷ ದಾಖಲೆ ಬರೆದಿದೆ.
ಟಿ20 ಗರಿಷ್ಠ ಸ್ಕೋರ್: ಟಿ20 ಕ್ರಿಕೆಟ್ ಇತಿಹಾಸದಲ್ಲೇ ಉಭಯ ತಂಡಗಳು ಸೇರಿ ಗರಿಷ್ಠ ಸ್ಕೋರ್ ಗಳಿಸಿದ ದಾಖಲೆ ಕೂಡ ಸನ್ರೈಸರ್ಸ್-ಮುಂಬೈ ಇಂಡಿಯನ್ಸ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ 315 ರನ್ ಬಾರಿಸಿದ್ದ ವೆಸ್ಟ್ ಇಂಡೀಸ್-ಸೌತ್ ಆಫ್ರಿಕಾ ತಂಡಗಳ ಹೆಸರಿನಲ್ಲಿತ್ತು.
ಸಿಕ್ಸರ್ ದಾಖಲೆ: ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬರೋಬ್ಬರಿ 20 ಸಿಕ್ಸ್ ಸಿಡಿಸುವ ಮೂಲಕ ಐಪಿಎಲ್ ಪಂದ್ಯವೊಂದರಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ 2ನೇ ತಂಡ ಎನಿಸಿಕೊಂಡಿದೆ. ಈ ಪಟ್ಟಿಯಲ್ಲಿ 21 ಸಿಕ್ಸ್ ಸಿಡಿಸಿರುವ ಆರ್ಸಿಬಿ ಅಗ್ರಸ್ಥಾನದಲ್ಲಿದೆ.
ಎಸ್ಆರ್ಹೆಚ್ ಸಿಕ್ಸರ್ ದಾಖಲೆ: ಈ ಪಂದ್ಯದಲ್ಲಿ ಎಸ್ಆರ್ಹೆಚ್ ತಂಡವು 18 ಸಿಕ್ಸ್ಗಳನ್ನು ಬಾರಿಸಿತ್ತು. ಈ ಮೂಲಕ ಐಪಿಎಲ್ ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ 3ನೇ ತಂಡ ಎನಿಸಿಕೊಂಡಿದೆ.
250 ರನ್ಗಳ ದಾಖಲೆ: ಐಪಿಎಲ್ ಇತಿಹಾಸದಲ್ಲಿ ಅತೀ ವೇಗವಾಗಿ 250 ರನ್ ಕಲೆಹಾಕಿದ ಆರ್ಸಿಬಿ ತಂಡದ ದಾಖಲೆಯನ್ನು ಎಸ್ಆರ್ಹೆಚ್ ತಂಡ ಸರಿಗಟ್ಟಿದೆ.
200 ರನ್ಗಳ ದಾಖಲೆ: ಐಪಿಎಲ್ನಲ್ಲಿ ಅತೀ ವೇಗವಾಗಿ 200 ರನ್ ಪೂರೈಸಿದ 2ನೇ ತಂಡ ಎಂಬ ದಾಖಲೆ ಎಸ್ಆರ್ಹೆಚ್ ಪಾಲಾಗಿದೆ. ಸನ್ರೈಸರ್ಸ್ ಹೈದರಾಬಾದ್ ತಂಡವು 14.4 ಓವರ್‌ಗಳಲ್ಲಿ ಈ ದಾಖಲೆ ಬರೆದರೆ, ಆರ್ಸಿಬಿ 14.1 ಓವರ್‌ಗಳಲ್ಲಿ ಈ ಸಾಧನೆ ಮಾಡಿತ್ತು.
10 ಓವರ್ಗಳ ದಾಖಲೆ: ಮೊದಲ 10 ಓವರ್‌ಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭರ್ಜರಿ ದಾಖಲೆ ಕೂಡ ಸನ್ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಎಸ್ಆರ್ಹೆಚ್ 10 ಓವರ್‌ಗಳಲ್ಲಿ 148 ರನ್ ಕಲೆಹಾಕಿ ಈ ದಾಖಲೆ ಬರೆದಿದೆ.
ಕೆಟ್ಟ ದಾಖಲೆ: ಈ ಪಂದ್ಯದ ಮೂಲಕ ಮುಂಬೈ ಇಂಡಿಯನ್ಸ್ ಪರ ಪಾದಾರ್ಪಣೆ ಮಾಡಿದ ಕ್ವೆನಾ ಮಫಕಾ 4 ಓವರ್‌ಗಳಲ್ಲಿ 66 ರನ್ ನೀಡಿದ್ದರು. ಈ ಮೂಲಕ ಚೊಚ್ಚಲ ಪಂದ್ಯದಲ್ಲಿ ಅತ್ಯಧಿಕ ರನ್ ನೀಡಿದ ವಿದೇಶಿ ವೇಗಿ ಎನಿಸಿಕೊಂಡಿದ್ದಾರೆ.
ಮಫಾಕ ಅನಗತ್ಯ ದಾಖಲೆ: ಈ ಪಂದ್ಯದಲ್ಲಿ 66 ರನ್ ಚಚ್ಚಿಸಿಕೊಳ್ಳುವ ಮೂಲಕ ಮುಂಬೈ ಇಂಡಿಯನ್ಸ್ ಪರ ಅತ್ಯಧಿಕ ರನ್ ಬಿಟ್ಟು ಕೊಟ್ಟ ಬೌಲರ್ ಎಂಬ ಅಪಖ್ಯಾತಿಗೂ ಕ್ವೆನಾ ಮಫಕಾ ಪಾತ್ರರಾಗಿದ್ದಾರೆ.
ದುಬಾರಿ ಬೌಲರ್: ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಬೌಲರ್ಗಳ ಪಟ್ಟಿಯಲ್ಲೂ ಕ್ವೆನಾ ಮಫಕಾ (66) ಮೂರನೇ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ 4 ಓವರ್‌ಗಳಲ್ಲಿ 70 ರನ್ ನೀಡಿದ ಬಾಸಿಲ್ ಥಂಪಿ ಅಗ್ರಸ್ಥಾನದಲ್ಲಿದ್ದಾರೆ.
ವೇಗದ ಅರ್ಧಶತಕ: ಸನ್ರೈಸರ್ಸ್ ಹೈದರಾಬಾದ್ ಪರ ಅತಿ ವೇಗದ ಅರ್ಧಶತಕ ಬಾರಿಸಿದ ದಾಖಲೆ ಅಭಿಷೇಕ್ ಶರ್ಮಾ ಪಾಲಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿ ಅಭಿಷೇಕ್ ಈ ಸಾಧನೆ ಮಾಡಿದ್ದಾರೆ.
2ನೇ ವೇಗದ ಅರ್ಧಶತಕ: ಎಸ್ಆರ್ಹೆಚ್ ಪರ 2ನೇ ವೇಗದ ಅರ್ಧಶತಕದ ದಾಖಲೆಯನ್ನು ಟ್ರಾವಿಸ್ ಹೆಡ್ ನಿರ್ಮಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೇ 18 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿ ಈ ದಾಖಲೆ ಬರೆದಿದ್ದಾರೆ.
ಟಾಪ್ 5 ದಾಖಲೆ: ಐಪಿಎಲ್ ಇತಿಹಾಸದಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ಟಾಪ್-5 ಬ್ಯಾಟರ್ಗಳ ಪಟ್ಟಿಯಲ್ಲೂ ಅಭಿಷೇಕ್ ಕಾಣಿಸಿಕೊಂಡಿದ್ದಾರೆ. ಕೇವಲ 16 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿ ಅಭಿಷೇಕ್ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರೆ, 13 ಎಸೆತಗಳಲ್ಲಿ ಶತಕ ಬಾರಿಸಿದ ಯಶಸ್ವಿ ಜೈಸ್ವಾಲ್ ಅಗ್ರಸ್ಥಾನದಲ್ಲಿದ್ದಾರೆ.
ಚೇಸಿಂಗ್ ದಾಖಲೆ: ಈ ಪಂದ್ಯದಲ್ಲಿ ಎಸ್ಆರ್ಹೆಚ್ ನೀಡಿದ 278 ರನ್ಗಳನ್ನು ಚೇಸ್ ಮಾಡಿದ ಮುಂಬೈ ಇಂಡಿಯನ್ಸ್ 5 ವಿಕೆಟ್ ಕಳೆದುಕೊಂಡು 246 ರನ್ ಕಲೆಹಾಕಿತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಚೇಸಿಂಗ್ನಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಮುಂಬೈ ಇಂಡಿಯನ್ಸ್ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ರಾಜಸ್ಥಾನ್ ರಾಯಲ್ಸ್ ಹೆಸರಿನಲ್ಲಿತ್ತು. 2020 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 226 ರನ್ ಚೇಸ್ ಮಾಡುವ ಮೂಲಕ ರಾಜಸ್ಥಾನ್ ರಾಯಲ್ಸ್ ದಾಖಲೆ ನಿರ್ಮಿಸಿತ್ತು. ಇದೀಗ ಈ ದಾಖಲೆಯನ್ನು ಮುಂಬೈ ಇಂಡಿಯನ್ಸ್ ಮುರಿದಿದೆ.
Published On - 10:10 am, Thu, 28 March 24