- Kannada News Photo gallery Cricket photos IPL 2024 KKR vs SRH: Hyderabad franchises' Australian connection
IPL 2024: ಈ ಸಲ ಕಪ್ SRH ತಂಡಕ್ಕೆ, ಹೀಗೊಂದು ಲೆಕ್ಕಾಚಾರ..!
IPL 2024 KKR vs SRH: ಐಪಿಎಲ್ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಚೆನ್ನೈನ ಎಂಎ ಚಿದಂಬರಂ (ಚೆಪಾಕ್) ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕೆಕೆಆರ್ ಹಾಗೂ ಎಸ್ಆರ್ಹೆಚ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಿದರೆ, ಎಸ್ಆರ್ಹೆಚ್ ತಂಡ ಪ್ಯಾಟ್ ಕಮಿನ್ಸ್ ಸಾರಥ್ಯದಲ್ಲಿ ಕಣಕ್ಕಿಳಿಯಲಿದೆ.
Updated on:May 25, 2024 | 1:32 PM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಫೈನಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ (ಮೇ 26) ನಡೆಯಲಿರುವ ಈ ಪಂದ್ಯದೊಂದಿಗೆ ಐಪಿಎಲ್ ಸೀಸನ್-17 ಕ್ಕೆ ತೆರೆ ಬೀಳಲಿದೆ.

ಈ ನಿರ್ಣಾಯಕ ಪಂದ್ಯದಲ್ಲಿ ಕೆಕೆಆರ್ ಹಾಗೂ ಎಸ್ಆರ್ಹೆಚ್ ತಂಡಗಳು ಮುಖಾಮುಖಿಯಾಗುತ್ತಿರುವುದರಿಂದ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಏಕೆಂದರೆ ಈ ಬಾರಿಯ ಪಾಯಿಂಟ್ಸ್ ಟೇಬಲ್ನಲ್ಲಿ ಕೆಕೆಆರ್ ಅಗ್ರಸ್ಥಾನ ಅಲಂಕರಿಸಿದ್ದರೆ, ಎಸ್ಆರ್ಹೆಚ್ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

ಈ ರಣರೋಚಕ ಪಂದ್ಯಕ್ಕೂ ಮುನ್ನ ಈ ಸಲ ಕಪ್ ಸನ್ರೈಸರ್ಸ್ ಹೈದರಾಬಾದ್ ಪಾಲಾಗಲಿದೆ ಎಂಬ ಲೆಕ್ಕಾಚಾರ ಕೂಡ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಹೈದರಾಬಾದ್ ತಂಡವನ್ನು ಆಸ್ಟ್ರೇಲಿಯಾ ಆಟಗಾರ ಮುನ್ನಡೆಸುತ್ತಿರುವುದು. ಅಂದರೆ ಐಪಿಎಲ್ ಇತಿಹಾಸದಲ್ಲಿ ಹೈದರಾಬಾದ್ ಫ್ರಾಂಚೈಸಿಯನ್ನು ಆಸ್ಟ್ರೇಲಿಯಾ ಆಟಗಾರ ಮುನ್ನಡೆಸಿದಾಗ ಟ್ರೋಫಿ ಗೆದ್ದ ಇತಿಹಾಸವಿದೆ.

2009 ರಲ್ಲಿ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ (ಈಗಿನ ಸನ್ರೈಸರ್ಸ್ ಹೈದರಾಬಾದ್) ತಂಡವನ್ನು ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟರ್ ಆ್ಯಡಂ ಗಿಲ್ಕ್ರಿಸ್ಟ್ ಮುನ್ನಡೆಸಿದ್ದರು. ಆ ಸೀಸನ್ನಲ್ಲಿ ಆರ್ಸಿಬಿ ವಿರುದ್ಧ 6 ರನ್ಗಳ ರೋಚಕ ಜಯ ಸಾಧಿಸಿ ಡೆಕ್ಕನ್ ಚಾರ್ಜರ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಇದಾದ ಬಳಿಕ ಹೈದರಾಬಾದ್ ಫ್ರಾಂಚೈಸಿ ಫೈನಲ್ ಪ್ರವೇಶಿಸಿದ್ದು 2016 ರಲ್ಲಿ. ಅಂದು ಎಸ್ಆರ್ಹೆಚ್ ತಂಡವನ್ನು ಮುನ್ನಡೆಸಿದವರು ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್. ಫೈನಲ್ ಪಂದ್ಯದಲ್ಲಿ ಆರ್ಸಿಬಿ ತಂಡವನ್ನು 8 ರನ್ಗಳಿಂದ ಸೋಲಿಸಿ ಸನ್ರೈಸರ್ಸ್ ಹೈದರಾಬಾದ್ ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು.

ಇದೀಗ ಮತ್ತೊಮ್ಮೆ ಆಸ್ಟ್ರೇಲಿಯಾ ನಾಯಕನ ಮುಂದಾಳತ್ವದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಫೈನಲ್ಗೆ ಪ್ರವೇಶಿಸಿದೆ. ಈ ಬಾರಿ ಎಸ್ಆರ್ಹೆಚ್ ತಂಡದ ನಾಯಕನಾಗಿ ಸೈಲೆಂಸರ್ ಖ್ಯಾತಿಯ ಪ್ಯಾಟ್ ಕಮಿನ್ಸ್ ಇದ್ದಾರೆ. ಹೀಗಾಗಿ ಆಸ್ಟ್ರೇಲಿಯನ್ ನಾಯಕ ಸಾರಥ್ಯದಲ್ಲಿ ಈ ಬಾರಿ ಸನ್ರೈಸರ್ಸ್ ಹೈದರಾಬಾದ್ ಕಪ್ ಗೆಲ್ಲಲಿದೆ ಎಂಬ ವಾದಗಳು ಶುರುವಾಗಿದೆ.

ಈ ವಾದಗಳನ್ನು ತಲೆಕೆಳಗಾಗಿಸಿದ ಶ್ರೇಯಸ್ ಅಯ್ಯರ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 3ನೇ ಬಾರಿ ಚಾಂಪಿಯನ್ ಪಟ್ಟ ತಂದುಕೊಡಲಿದ್ದಾರಾ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಎರಡು ಬಲಿಷ್ಠ ತಂಡಗಳು ಫೈನಲ್ಗೆ ಎಂಟ್ರಿ ಕೊಟ್ಟಿರುವುದರಿಂದ ಅಂತಿಮ ಹಣಾಹಣಿಯಲ್ಲಿ ಭರ್ಜರಿ ಪೈಪೋಟಿಯನ್ನಂತು ನಿರೀಕ್ಷಿಸಬಹುದು.
Published On - 1:31 pm, Sat, 25 May 24
