KL Rahul: ಕೆಎಲ್ ರಾಹುಲ್ RCBಗೆ ನಾಯಕರಾಗ್ತಾರಾ?
TV9 Web | Updated By: ಝಾಹಿರ್ ಯೂಸುಫ್
Updated on:
May 14, 2024 | 12:18 PM
IPL 2024: ಐಪಿಎಲ್ನಲ್ಲಿ ಕೆಎಲ್ ರಾಹುಲ್ ಆರ್ಸಿಬಿ ಪರ 19 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 14 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ರಾಹುಲ್ 4 ಅರ್ಧಶತಕಗಳೊಂದಿಗೆ ಒಟ್ಟು 417 ರನ್ ಕಲೆಹಾಕಿದ್ದಾರೆ. ಇದೀಗ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿರುವ ರಾಹುಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ ಮಾತ್ರ ಆರ್ಸಿಬಿ ಫ್ರಾಂಚೈಸಿ ಖರೀದಿಸಬಹುದು.
1 / 8
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇದರ ಬೆನ್ನಲ್ಲೇ ಕೆಎಲ್ ರಾಹುಲ್ (KL Rahul) ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡಲಾರಂಭಿಸಿದೆ. ಇಂತಹದೊಂದು ಸುದ್ದಿ ಹುಟ್ಟಿಕೊಳ್ಳಲು ಮುಖ್ಯ ಕಾರಣ ಕೆಎಲ್ ರಾಹುಲ್ ಅವರನ್ನು ಇತ್ತೀಚೆಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕರಾದ ಸಂಜಯ್ ಗೊಯೆಂಕಾ ತರಾಟೆಗೆ ತೆಗೆದುಕೊಂಡಿದ್ದು.
2 / 8
ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಹೀನಾಯ ಸೋಲನುಭವಿಸುತ್ತಿದ್ದಂತೆ ಮೈದಾನಕ್ಕೆ ಆಗಮಿಸಿದ ಸಂಜಯ್ ಗೊಯೆಂಕಾ ಕೆಎಲ್ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ರಾಹುಲ್ ಎಲ್ಎಸ್ಜಿ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡಲಾರಂಭಿಸಿದ್ದವು.
3 / 8
ಇದೀಗ ಈ ಸುದ್ದಿಯು ಮತ್ತೊಂದು ಮಜಲಿನತ್ತ ಸಾಗುತ್ತಿದೆ. ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗುಡ್ ಬೈ ಹೇಳುವುದು ಖಚಿತ, ಅಲ್ಲದೆ ಮುಂದಿನ ಸೀಸನ್ನಲ್ಲಿ ಆರ್ಸಿಬಿ ಪರ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ. ಏಕೆಂದರೆ ಐಪಿಎಲ್ ಸೀಸನ್ 18 ಗಾಗಿ ಮೆಗಾ ಹರಾಜು ನಡೆಯಲಿದ್ದು, ಈ ಹರಾಜಿನಲ್ಲಿ ರಾಹುಲ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
4 / 8
ಒಂದು ವೇಳೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ ಕೆಎಲ್ ರಾಹುಲ್ ಖರೀದಿಗೆ ಆರ್ಸಿಬಿ ಮುಂದಾಗಲಿದೆ. ಏಕೆಂದರೆ ಈ ಹಿಂದೆ ಆರ್ಸಿಬಿ ಪರ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೆ ಈ ಬಾರಿಯ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಆರ್ಸಿಬಿ ತಂಡದಲ್ಲೂ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆ ಹೆಚ್ಚಿದೆ.
5 / 8
ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ದಿನೇಶ್ ಕಾರ್ತಿಕ್ ಆರ್ಸಿಬಿ ತಂಡದಿಂದ ಹೊರಬೀಳಬಹುದು. ಏಕೆಂದರೆ ಫಾಫ್ ಡುಪ್ಲೆಸಿಸ್ಗೆ ಈಗ 39 ವರ್ಷ, ಅತ್ತ ದಿನೇಶ್ ಕಾರ್ತಿಕ್ಗೆ 38 ವರ್ಷಗಳು. ಹೀಗಾಗಿ ಮುಂದಿನ ಸೀಸನ್ಗಾಗಿ ಫಾಫ್ ಡುಪ್ಲೆಸಿಸ್ ಹಾಗೂ ಡಿಕೆಯನ್ನು ಆರ್ಸಿಬಿ ಉಳಿಸಿಕೊಳ್ಳುವ ಸಾಧ್ಯತೆಯಿಲ್ಲ.
6 / 8
ಇತ್ತ ಕೆಎಲ್ ರಾಹುಲ್ ಆಯ್ಕೆಯಿಂದ ಆರ್ಸಿಬಿ ಈ ಎರಡು ಸ್ಥಾನಗಳನ್ನು ತುಂಬಬಹುದು. ಅಂದರೆ ನಾಯಕನಾಗಿ ಎರಡು ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಪ್ಲೇಆಫ್ಗೆ ಕೊಂಡೊಯ್ದಿರುವ ಕೆಎಲ್ ರಾಹುಲ್ ಈಗಾಗಲೇ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಇದರ ಜೊತೆಗೆ ವಿಕೆಟ್ ಕೀಪರ್ ಆಗಿಯೂ ಐಪಿಎಲ್ನಲ್ಲಿ ಮಿಂಚಿದ್ದಾರೆ.
7 / 8
ಅಂದರೆ ಕೆಎಲ್ ರಾಹುಲ್ ಆಯ್ಕೆಯಿಂದ ಆರ್ಸಿಬಿ ಫ್ರಾಂಚೈಸಿ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರ ಸ್ಥಾನಗಳನ್ನು ತುಂಬಬಹುದು. ಹೀಗಾಗಿಯೇ ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್ ಕಾಣಿಸಿಕೊಂಡರೆ ಕನ್ನಡಿಗನ ಖರೀದಿಗೆ ಆರ್ಸಿಬಿ ಫ್ರಾಂಚೈಸಿ ಮುಂಚೂಣಿಯಲ್ಲಿರಲಿದೆ.
8 / 8
ಅದರಂತೆ ಐಪಿಎಲ್ 2025 ರಲ್ಲಿ ಕೆಎಲ್ಆರ್ ಆರ್ಸಿಬಿಗೆ ಬಂದರೆ ಕ್ಯಾಪ್ಟನ್ ಪಟ್ಟದೊಂದಿಗೆ ಕಣಕ್ಕಿಳಿಯುವುದು ಖಚಿತ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಕೆಎಲ್ ರಾಹುಲ್ (KL Rahul) ಹೊಸ ಅಧ್ಯಾಯ ಶುರು ಮಾಡಲಿದ್ದಾರಾ ಕಾದು ನೋಡಬೇಕಿದೆ.
Published On - 12:07 pm, Tue, 14 May 24