IPL 2024: ಈ ಸಲ ಕಪ್ KKR ಗೆ, ಹೀಗೊಂದು ಲೆಕ್ಕಾಚಾರ..!
IPL 2024: ಐಪಿಎಲ್ 2024 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಈವರೆಗೆ 13 ಪಂದ್ಯಗಳನ್ನಾಡಿದೆ. ಈ ಪಂದ್ಯಗಳಲ್ಲಿ 9 ಜಯ ಸಾಧಿಸಿರುವ ಕೆಕೆಆರ್ ತಂಡವು ಒಟ್ಟು 19 ಅಂಕಗಳನ್ನು ಕಲೆಹಾಕಿದೆ. ಅಂದರೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯವು ಮಳೆಯಿಂದಾಗಿ ರದ್ದಾದ ಕಾರಣ ಕೆಕೆಆರ್ ತಂಡಕ್ಕೆ ಒಂದು ಪಾಯಿಂಟ್ಸ್ ಲಭಿಸಿದ್ದು, ಅದರಂತೆ ಇದೀಗ 19 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
Updated on: May 14, 2024 | 10:22 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ರಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಈ ಅಗ್ರಸ್ಥಾನದೊಂದಿಗೆ ಇದೀಗ ಪ್ಲೇಆಫ್ ಪ್ರವೇಶಿಸಿದೆ. ಇದರೊಂದಿಗೆ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್ ಕಣಕ್ಕಿಳಿಯುವುದು ಕೂಡ ಖಚಿತವಾಗಿದೆ.

ಏಕೆಂದರೆ ಕೆಕೆಆರ್ ತಂಡವು ಒಟ್ಟು 19 ಅಂಕಗಳನ್ನು ಹೊಂದಿದ್ದು, ಮುಂದಿನ ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ಸತತ ಗೆಲುವು ಸಾಧಿಸಿದರೂ 20 ಅಂಕಗಳನ್ನು ಪಡೆಯಲಿದೆ. ಅತ್ತ ಆರ್ಆರ್ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಪಡೆದರೆ, ಕೆಕೆಆರ್ ದ್ವಿತೀಯ ಸ್ಥಾನಕ್ಕೆ ಕುಸಿಯಲಿದೆ. ಇದರ ಹೊರತಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಥಾನದಲ್ಲಿ ಯಾವುದೇ ಬದಲಾವಣೆ ಕಂಡು ಬರುವುದಿಲ್ಲ.

ಅದರಂತೆ ಅಂಕ ಪಟ್ಟಿಯಲ್ಲಿ ಟಾಪ್-2 ಸ್ಥಾನಗಳಲ್ಲಿ ಕಾಣಿಸಿಕೊಳ್ಳುವ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವಾಡಲಿದೆ. ಇಲ್ಲಿ ಕೆಕೆಆರ್ ತಂಡ ಟಾಪ್-2 ನಲ್ಲಿ ಕಾಣಿಸಿಕೊಳ್ಳುವುದರಿಂದ ಮೇ 21 ರಂದು ನಡೆಯಲಿರುವ ಕ್ವಾಲಿಫೈಯರ್ ಪಂದ್ಯವಾಡುವುದು ಖಚಿತವಾಗಿದೆ.

ವಿಶೇಷ ಎಂದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್ ಇತಿಹಾಸದಲ್ಲಿ ಕೇವಲ 2 ಬಾರಿ ಮಾತ್ರ ಮೊದಲ ಕ್ವಾಲಿಫೈಯರ್ ಪಂದ್ಯಗಳನ್ನಾಡಿದೆ. ಈ ಎರಡು ಸೀಸನ್ಗಳಲ್ಲೂ ಕೆಕೆಆರ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.

ಅಂದರೆ ಗೌತಮ್ ಗಂಭೀರ್ ನಾಯಕತ್ವದಲ್ಲಿ 2012 ರಲ್ಲಿ ಮತ್ತು 2014 ರಲ್ಲಿ ಕೆಕೆಆರ್ ತಂಡ ಮೊದಲ ಕ್ವಾಲಿಫೈಯರ್ ಪಂದ್ಯವಾಡಿ ಫೈನಲ್ಗೆ ಪ್ರವೇಶಿಸಿತ್ತು. ಹೀಗೆ ಫೈನಲ್ಗೆ ಪ್ರವೇಶಿಸಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 2 ಬಾರಿ ಕೂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ಯಶಸ್ವಿಯಾಗಿತ್ತು.

ಇದೀಗ 10 ವರ್ಷಗಳ ಬಳಿಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಮೊದಲ ಕ್ವಾಲಿಫೈಯರ್ ಪಂದ್ಯವಾಡಲು ಸಜ್ಜಾಗಿದೆ. ಹೀಗಾಗಿಯೇ ಈ ಬಾರಿ ಕೂಡ ಕಪ್ ನಮ್ದೆ ಎನ್ನುವ ಖುಷಿಯಲ್ಲಿದ್ದಾರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಫ್ಯಾನ್ಸ್. ಅದರಂತೆ ಕೆಕೆಆರ್ ತಂಡವು ಮೂರನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಲಿದೆಯಾ ಕಾದು ನೋಡಬೇಕಿದೆ.
