
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 6ನೇ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಆರ್ಸಿಬಿ ಗೆಲುವಿನ ಖಾತೆ ತೆರೆದಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 4 ವಿಕೆಟ್ಗಳಿಂದ ಗೆಲುವು ಸಾಧಿಸಿತ್ತು. ಈ ಪಂದ್ಯದ ನಡುವೆ ಕಾಮೆಂಟೇಟರ್ ಮುರಳಿ ಕಾರ್ತಿಕ್ ಆಡಿದ ಮಾತೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು ಪವರ್ಪ್ಲೇನಲ್ಲಿ ಉತ್ತಮವಾಗಿ ಆಡಲು ಸಾಧ್ಯವಾಗಿರಲಿಲ್ಲ. ಅದರಲ್ಲೂ ಎಡಗೈ ವೇಗಿ ಯಶ್ ದಯಾಳ್ ಕರಾರುವಾಕ್ ಬೌಲಿಂಗ್ ಸಂಘಟಿಸಿದ್ದರು. ಮೊದಲ ಎರಡು ಓವರ್ಗಳಲ್ಲಿ ಯಶ್ ನೀಡಿದ್ದು ಕೇವಲ 4 ರನ್ಗಳು ಮಾತ್ರ,

ಹೀಗೆ ಅದ್ಭುತವಾಗಿ ಬೌಲಿಂಗ್ ನಡುವೆ ಕಾಮೆಂಟೇಟರ್ ಮುರಳಿ ಕಾರ್ತಿಕ್ ನಾಲಿಗೆ ಹರಿಬಿಟ್ಟಿದ್ದಾರೆ. ಕೆಲವರಿಗೆ ಕಸದ ಡಬ್ಬವಾದರೆ, ಮತ್ತೆ ಕೆಲವರ ಖಜಾನೆ... ಎನ್ನುವ ಮೂಲಕ ಯಶ್ ದಯಾಳ್ ಅವರನ್ನು ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಅಪಹಾಸ್ಯ ಮಾಡಿದ್ದಾರೆ.

ಇಲ್ಲಿ ಪಂಜಾಬ್ ಕಿಂಗ್ಸ್ ಬ್ಯಾಟರ್ಗಳು ದಯಾಳ್ ಎಸೆತಗಳನ್ನು ಎದುರಿಸಲು ಪರದಾಡುತ್ತಿರುವುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿ, ಪಂಜಾಬ್ ಪಾಲಿಗೆ ಯಶ್ ಕಸ... ರಿಂಕು ಸಿಂಗ್ ಪಾಲಿಗೆ ಖಜಾನೆ ಎಂಬಾರ್ಥದಲ್ಲಿ ಮುರಳಿ ಕಾರ್ತಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆ ಬೆನ್ನಲ್ಲೇ ಮುರಳಿ ಕಾರ್ತಿಕ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಕಾಮೆಂಟೇಟರ್ ಸ್ಥಾನದಲ್ಲಿ ಇಂತಹ ಬಾಲಿಶ ಹೇಳಿಕೆಗಳನ್ನು ನೀಡಲು ಅಸಹ್ಯವಾಗುತ್ತಿಲ್ಲವೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದಾಗ್ಯೂ ಕಾರ್ತಿಕ್ ಈ ಬಗ್ಗೆ ಇದುವರೆಗೆ ಯಾವುದೇ ಪಶ್ಚಾತಾಪ ವ್ಯಕ್ತಪಡಿಸಿಲ್ಲ ಎಂಬುದು ಅಚ್ಚರಿ.

ಇನ್ನು ಮೊದಲೆರಡು ಪಂದ್ಯಗಳಲ್ಲಿ ಸೋಲು-ಗೆಲುವಿನ ರುಚಿ ನೋಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮೂರನೇ ಪಂದ್ಯವನ್ನು ಶುಕ್ರವಾರ ಆಡಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.