
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಮೂರು 250 ಸ್ಕೋರ್ ಗಳಿಸಿರುವ ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ಮುಂದಿನ ಗುರಿ 300 ರನ್ಗಳು. ಇದನ್ನು ಹೇಳಿದ್ದು ಮತ್ಯಾರೂ ಅಲ್ಲ, ಎಸ್ಆರ್ಹೆಚ್ ತಂಡದ ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್. ಅದರಂತೆ ಮುಂದಿನ ಪಂದ್ಯದಲ್ಲಿ 300 ರನ್ ಕಲೆಹಾಕುವ ವಿಶ್ವಾಸದಲ್ಲಿದೆ ಸನ್ರೈಸರ್ಸ್ ಹೈದರಾಬಾದ್ ತಂಡ.

ಇಲ್ಲಿ ಕುತೂಹಲಕಾರಿ ವಿಷಯ ಎಂದರೆ, ಸನ್ರೈಸರ್ಸ್ ಹೈದರಾಬಾದ್ ತಂಡದ ಮುಂದಿನ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಂಬುದು. ಏಪ್ರಿಲ್ 25 ರಂದು ಹೈದರಾಬಾದ್ನಲ್ಲಿ ನಡೆಯಲಿರುವ ಐಪಿಎಲ್ನ 41ನೇ ಪಂದ್ಯದಲ್ಲಿ ಎಸ್ಆರ್ಹೆಚ್ ಮತ್ತು ಆರ್ಸಿಬಿ ಮುಖಾಮುಖಿಯಾಗಲಿದೆ.

ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಎಸ್ಆರ್ಹೆಚ್ ತಂಡವು 287 ರನ್ ಬಾರಿಸಿ ಐಪಿಎಲ್ನಲ್ಲಿ ಹೊಸ ದಾಖಲೆ ಬರೆದಿತ್ತು. ಇದೀಗ ಎಸ್ಆರ್ಹೆಚ್ ತಂಡವು 300 ರನ್ಗಳ ಗುರಿಯೊಂದಿಗೆ ಮತ್ತೆ ಆರ್ಸಿಬಿ ವಿರುದ್ಧ ಕಣಕ್ಕಿಳಿಯಲಿದೆ.

ಈಗಾಗಲೇ ಆರ್ಸಿಬಿ ವಿರುದ್ಧ 287, ಮುಂಬೈ ಇಂಡಿಯನ್ಸ್ ವಿರುದ್ಧ 277 ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 266 ರನ್ ಬಾರಿಸಿರುವ ಸನ್ರೈಸರ್ಸ್ ಹೈದರಾಬಾದ್ ಬ್ಯಾಟರ್ಗಳು 300 ರನ್ ಕಲೆಹಾಕುವ ವಿಶ್ವಾಸದಲ್ಲಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆಯುವ ಹುಮ್ಮಸ್ಸಿನಲ್ಲಿದ್ದಾರೆ.

ಇತ್ತ ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ಮುಂದಿನ ಪಂದ್ಯ ನಿರ್ಣಾಯಕ. ಏಕೆಂದರೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆರ್ಸಿಬಿ ಸೋತರೆ ಪ್ಲೇಆಫ್ ರೇಸ್ನಿಂದ ಹೊರಬೀಳುವುದು ಬಹುತೇಕ ಖಚಿತವಾಗಲಿದೆ. ಹೀಗಾಗಿ ಆರ್ಸಿಬಿ ಪಾಲಿಗೆ ಮುಂದಿನ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾದರೆ, ಎಸ್ಆರ್ಹೆಚ್ ಪಾಲಿಗೆ 300 ರನ್ಗಳ ಗುರಿಯ ಪಂದ್ಯವಾಗಿ ಮಾರ್ಪಟ್ಟಿದೆ. ಹೀಗಾಗಿ ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ರನ್ ಮಳೆಯನ್ನಂತು ನಿರೀಕ್ಷಿಸಬಹುದು.