ಐಪಿಎಲ್ 17ನೇ ಆವೃತ್ತಿಯ 36ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಗರಂ ಆಗಿದ್ದ ವಿರಾಟ್ ಕೊಹ್ಲಿ ಮೈದಾನದಲ್ಲೇ ಅಂಪೈರ್ ಜೊತೆ ವಾಗ್ವಾದಕ್ಕಿಳಿದು ಅಸಮಾಧಾನ ಹೊರಹಾಕಿದ್ದರು.
ಇದೀಗ ಅದರ ಫಲವಾಗಿ ವಿರಾಟ್ ಕೊಹ್ಲಿ ದಂಡದ ಭಾರ ಹೊರಬೇಕಾಗಿ ಬಂದಿದೆ. ವಾಸ್ತವವಾಗಿ ನಿನ್ನೆಯ ಪಂದ್ಯದಲ್ಲಿ ಅಂಪೈರ್ ನೀಡಿದ ತೀರ್ಪಿನ ಅಸಮಾಧಾನ ಹೊರಹಾಕಿದ್ದ ಕೊಹ್ಲಿ, ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರು. ಹೀಗಾಗಿ ವಿರಾಟ್ ಕೊಹ್ಲಿ ಅವರ ಈ ನಡುವಳಿಕೆಯ ವಿರುದ್ಧ ಬಿಸಿಸಿಐ ಕ್ರಮ ಕೈಗೊಂಡಿದೆ.
ಅದರಂತೆ ಕೊಹ್ಲಿ ಪಂದ್ಯ ಶುಲ್ಕದ 50 ಪ್ರತಿಶತ ಸಂಭಾವನೆಯನ್ನು ದಂಡವಾಗಿ ಪಾವತಿಸಬೇಕಾಗಿದೆ. ಈ ಮೂಲಕ ನಿನ್ನೆ ನಡೆದ ಎರಡು ಪಂದ್ಯಗಳಲ್ಲಿ ಮೂವರು ಆಟಗಾರರು ದಂಡಕ್ಕೊಳಗಾದಂತ್ತಾಗಿದೆ. ಕೊಹ್ಲಿಗೂ ಮುನ್ನ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಕೂಡ ನಿಧಾನಗತಿಯ ಓವರ್ನಿಂದಾಗಿ ದಂಡಕ್ಕೊಳಗಾಗಿದ್ದರು.
ವಾಸ್ತವವಾಗಿ ಕೆಕೆಆರ್ ನೀಡಿದ 223 ರನ್‌ಗಳ ಗುರಿ ಬೆನ್ನತ್ತಿದ ಆರ್ಸಿಬಿಗೆ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು. ಆದರೆ ಇನ್ನಿಂಗ್ಸ್ನ ಮೂರನೇ ಓವರ್ ಬೌಲ್ ಮಾಡಲು ದಾಳಿಗಿಳಿದ ಹರ್ಷಿತ್ ರಾಣಾ ಎಸೆದ ಮೊದಲ ಎಸೆತದಲ್ಲೇ ವಿರಾಟ್ ಕೊಹ್ಲಿ ವಿಕೆಟ್ ಪತನವಾಯಿತು.
ರಾಣಾ ಬೌಲ್ ಮಾಡಿದ ಆ ಎಸೆತ ನಿಧಾನಗತಿಯ ಫುಲ್ ಟಾಸ್ ಬಾಲ್ ಆಗಿತ್ತು. ಈ ವೇಳೆ ಗೊಂದಲಕ್ಕೀಡಾದ ವಿರಾಟ್, ಆ ಎಸೆತವನ್ನು ಡಿಫೆಂಡ್ ಮಾಡಲು ಯತ್ನಿಸಿದರು. ಆದರೆ ಚೆಂಡು ಕೊಹ್ಲಿಯ ಬ್ಯಾಟ್ಗೆ ತಗುಲಿ ಮೇಲೆ ಹೋಯಿತು. ಬೌಲರ್ ಹರ್ಷಿತ್ ರಾಣಾ ಸುಲಭ ಕ್ಯಾಚ್ ತೆಗೆದುಕೊಂಡರು.
ಅಂಪೈರ್ ಕೂಡ ಔಟೆಂದು ತೀರ್ಪು ನೀಡಿದರು. ಆದರೆ ಅಂಪೈರ್ ನಿರ್ಧಾರದ ವಿರುದ್ಧ ಶಾಕ್ಗೆ ಒಳಗಾದ ಕೊಹ್ಲಿ, ರಿವ್ಯೂ ತೆಗೆದುಕೊಂಡರು. ಇಲ್ಲಿ ಮೂರನೇ ಅಂಪೈರ್ ಕೂಡ ಕೊಹ್ಲಿ ಔಟೆಂದು ತೀರ್ಪು ನೀಡಿದರು. ಇದರಿಂದ ಕೋಪಗೊಂಡ ಕೊಹ್ಲಿ, ಫೀಲ್ಡ್ ಅಂಪೈರ್ ಜೊತೆ ಕೆಲ ಸಮಯ ವಾಗ್ವಾದ ನಡೆಸಿದ್ದರು.
Published On - 5:29 pm, Mon, 22 April 24