ಟೀಂ ಇಂಡಿಯಾದಲ್ಲಿಲ್ಲ ಸ್ಥಾನ; ಆಂಗ್ಲರ ನಾಡಲ್ಲಿ ದ್ವಿಶತಕ ಸಿಡಿಸಿದ ಕನ್ನಡಿಗ ಕರುಣ್ ನಾಯರ್..!
Karun Nair: ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದೆ ವಿದೇಶಿ ಕೌಂಟಿಯತ್ತ ಮುಖ ಮಾಡಿರುವ ಕನ್ನಡಿಗೆ ಕರುಣ್ ನಾಯರ್ ಇದೀಗ ಆಂಗ್ಲರ ನಾಡಲ್ಲಿ ಅಜೇಯ ಶತಕ ಸಿಡಿಸಿ ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯುವ ಇರಾದೆಯಲ್ಲಿದ್ದಾರೆ. ಪ್ರಸ್ತುತ ಕರುಣ್ ನಾಯರ್ ಇಂಗ್ಲೆಂಡ್ನಲ್ಲಿ ಕೌಂಟಿ ಚಾಂಪಿಯನ್‌ಶಿಪ್ ಆಡುತ್ತಿದ್ದಾರೆ.
Updated on: Apr 22, 2024 | 9:53 PM

ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಅದರಲ್ಲೂ ಬಲಿಷ್ಠ ಇಂಗ್ಲೆಂಡ್ ಎದುರು ತ್ರಿಶತಕ ಸಿಡಿಸಿದ್ದ ಕನ್ನಡಿಗ ಕರುಣ್ ನಾಯರ್ ಭಾರತ ಟೆಸ್ಟ್ ತಂಡದ ಭವಿಷ್ಯದ ಸೂಪರ್ ಸ್ಟಾರ್ ಆಗುವ ಎಲ್ಲಾ ಸೂಚನೆ ನೀಡಿದ್ದರು. ಆದರೆ ಆ ಬಳಿಕ ಕರುಣ್ಗೆ ಟೀಂ ಇಂಡಿಯಾದಲ್ಲಿ ಹೆಚ್ಚಿನ ಅವಕಾಶ ಸಿಗಲೇ ಇಲ್ಲ.

ಇದಾದ ನಂತರ ದೇಶೀ ಟೂರ್ನಿಗಳಲ್ಲಿ ಅಮೋಘ ಪ್ರದರ್ಶ ನೀಡಿದ ಹೊರತಾಗಿಯೂ ನಾಯರ್ಗೆ ಟೀಂ ಇಂಡಿಯಾ ಕದ ತೆರೆಯಲಿಲ್ಲ. ಇದಲ್ಲದೆ ಐಪಿಎಲ್ನಲ್ಲೂ ಕರುಣ್ರನ್ನು ಖರೀದಿಸಲು ಯಾವ ತಂಡವೂ ಮುಂದೆ ಬರಲಿಲ್ಲ.

ಹೀಗಾಗಿ ವಿದೇಶಿ ಕೌಂಟಿಯತ್ತ ಮುಖ ಮಾಡಿರುವ ಕರುಣ್ ನಾಯರ್ ಇದೀಗ ಆಂಗ್ಲರ ನಾಡಲ್ಲಿ ಅಜೇಯ ಶತಕ ಸಿಡಿಸಿ ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯುವ ಇರಾದೆಯಲ್ಲಿದ್ದಾರೆ. ಪ್ರಸ್ತುತ ಕರುಣ್ ನಾಯರ್ ಇಂಗ್ಲೆಂಡ್ನಲ್ಲಿ ಕೌಂಟಿ ಚಾಂಪಿಯನ್‌ಶಿಪ್ ಆಡುತ್ತಿದ್ದಾರೆ.

ಈ ಚಾಂಪಿಯನ್ಶಿಪ್ನಲ್ಲಿ ನಾರ್ಥಾಂಪ್ಟನ್‌ಶೈರ್ ತಂಡವನ್ನು ಪ್ರತಿನಿಧಿಸುತ್ತಿರುವ ಕರುಣ್, ವಿಟಾಲಿಟಿ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಎರಡರಲ್ಲಿ ಗ್ಲಾಮೋರ್ಗನ್ ತಂಡದ ವಿರುದ್ಧ ಅಜೇಯ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.

ಕರುಣ್ ನಾಯರ್ ತಮ್ಮ ಇನ್ನಿಂಗ್ಸ್ನಲ್ಲಿ 253 ಎಸೆತಗಳನ್ನು ಎದುರಿಸಿ ಅಜೇಯ 202 ರನ್ ಗಳಿಸಿದರು. ನಾಯರ್ ಅವರ ಈ ಅಮೋಘ ಆಟದಿಂದಾಗಿ ನಾರ್ಥಾಂಪ್ಟನ್‌ಶೈರ್ ತಂಡ 334 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 6 ವಿಕೆಟ್‌ಗೆ 605 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದುವರೆಗೆ 100 ಪಂದ್ಯಗಳನ್ನಾಡಿರುವ ಕರುಣ್ ನಾಯರ್ 48.34ರ ಸರಾಸರಿಯಲ್ಲಿ 6962 ರನ್ ಗಳಿಸಿದ್ದಾರೆ. ಇದರಲ್ಲಿ18 ಶತಕ ಮತ್ತು 32 ಅರ್ಧ ಶತಕಗಳು ಸೇರಿವೆ.

ಏತನ್ಮಧ್ಯೆ ಭಾರತದ ಪರ 6 ಟೆಸ್ಟ್ ಪಂದ್ಯಗಳನ್ನಾಡಿರುವ ಕರುಣ್ 62.33 ರ ಸರಾಸರಿಯಲ್ಲಿ 374 ರನ್ ಬಾರಿಸಿದ್ದಾರೆ. ಇದಲ್ಲದೆ ಟೀಂ ಇಂಡಿಯಾ ಪರ ಎರಡು ಏಕದಿನ ಪಂದ್ಯಗಳನ್ನು ಆಡಿರುವ ಅವರು 23 ರ ಸರಾಸರಿಯಲ್ಲಿ 46 ರನ್ ಬಾರಿಸಿದ್ದಾರೆ.




