IPL 2024: RCBಗೆ ಮಾಡು ಇಲ್ಲವೇ ಮಡಿ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್ಗೆ ಮತ್ತೊಂದು ಪಂದ್ಯ..!
IPL 2024 RCB vs DC: ಐಪಿಎಲ್ 2024 ರಲ್ಲಿ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ಲೇಆಫ್ ರೇಸ್ನಲ್ಲಿದೆ. ಉಭಯ ತಂಡಗಳಿಗೂ ಇನ್ನು 2 ಪಂದ್ಯಗಳಿದ್ದು, ಈ ಪಂದ್ಯಗಳಲ್ಲಿ ಆರ್ಸಿಬಿ ಗೆದ್ದರೆ ಒಟ್ಟು 14 ಪಾಯಿಂಟ್ಸ್ ಆಗಲಿದೆ. ಅದೇ ಡೆಲ್ಲಿ ಕ್ಯಾಪಿಟಲ್ಸ್ ತನ್ನ 2 ಮ್ಯಾಚ್ಗಳಲ್ಲೂ ಜಯ ಸಾಧಿಸಿದರೆ 16 ಅಂಕಗಳನ್ನು ಸಂಪಾದಿಸಲಿದೆ. ಹೀಗಾಗಿ ಪ್ಲೇಆಫ್ ರೇಸ್ನಲ್ಲಿರುವ ಎರಡೂ ತಂಡಗಳಿಗೂ ಇಂದಿನ ಪಂದ್ಯ ತುಂಬಾ ಮಹತ್ವದ್ದು.
Updated on: May 12, 2024 | 7:52 AM

ಐಪಿಎಲ್ನಲ್ಲಿ (IPL 2024) ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ಮಾತ್ರ ಪ್ಲೇಆಫ್ ರೇಸ್ನಲ್ಲಿ ಉಳಿಯಲಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋತರೂ ಮುಂದಿನ ಹಂತಕ್ಕೇರಲು ಅವಕಾಶ ಹೊಂದಿರಲಿದೆ.

ಏಕೆಂದರೆ ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಒಟ್ಟು 12 ಅಂಕಗಳನ್ನು ಹೊಂದಿದೆ. ಅತ್ತ ಆರ್ಸಿಬಿ ಹೊಂದಿರುವುದು ಕೇವಲ 10 ಪಾಯಿಂಟ್ಸ್ ಮಾತ್ರ. ಹೀಗಾಗಿ ಫಾಫ್ ಡುಪ್ಲೆಸಿಸ್ ಪಡೆ ಇಂದು ಗೆದ್ದರೂ 12 ಅಂಕಗಳನ್ನು ಮಾತ್ರ ಕಲೆಹಾಕಲಿದೆ.

ಮತ್ತೊಂದೆಡೆ ಆರ್ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೋತರೂ 12 ಅಂಕಗಳೊಂದಿಗೆ ಪ್ಲೇಆಫ್ ರೇಸ್ನಲ್ಲಿ ಕಾಣಿಸಿಕೊಳ್ಳಲಿದೆ. ಆದರೆ ನೆಟ್ ರನ್ ರೇಟ್ ಇಳಿಕೆಯಾದರೆ ಮಾತ್ರ ಅಂಕ ಪಟ್ಟಿಯಲ್ಲಿ ಆರ್ಸಿಬಿಗಿಂತ ಕೆಳ ಸ್ಥಾನ ಪಡೆಯಲಿದೆ. ಇದಾಗ್ಯೂ ಪ್ಲೇಆಫ್ ರೇಸ್ನಿಂದ ಹೊರಬೀಳುವುದಿಲ್ಲ.

ಬದಲಾಗಿ ಆರ್ಸಿಬಿಯಂತೆ 14 ಅಂಕಗಳನ್ನು ಕಲೆಹಾಕಲು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇನ್ನೊಂದು ಮ್ಯಾಚ್ ಕೂಡ ಇದೆ. ಅದರಂತೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇಆಫ್ ಅವಕಾಶವನ್ನು ಎದುರು ನೋಡಬಹುದು.

ಒಂದು ವೇಳೆ ಇಂದು ಆರ್ಸಿಬಿ ಸೋತರೆ ಪ್ಲೇಆಫ್ ರೇಸ್ನಿಂದ ಹೊರಬೀಳಲಿದೆ. ಏಕೆಂದರೆ ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಒಟ್ಟು 14 ಅಂಕಗಳನ್ನು ಸಂಪಾದಿಸಲಿದೆ. ಮತ್ತೊಂದೆಡೆ ಆರ್ಸಿಬಿ ಇಂದು ಸೋತು, ಕೊನೆಯ ಪಂದ್ಯದಲ್ಲಿ ಗೆದ್ದರೂ 12 ಅಂಕಗಳನ್ನು ಮಾತ್ರ ಹೊಂದಲಿದೆ.

ಹೀಗಾಗಿ ಇಂದಿನ ಪಂದ್ಯವು ಆರ್ಸಿಬಿ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಅದೇ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪ್ಲೇಆಫ್ ಹಾದಿಯನ್ನು ಸುಗಮಗೊಳಿಸಲಿರುವ ಮತ್ತೊಂದು ಪಂದ್ಯ. ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
