IPL 2024 RR vs RCB: ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ತಂಡವೇ ಬಲಿಷ್ಠ
IPL 2024 Playoffs: ಐಪಿಎಲ್ ಸೀಸನ್ 17ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಮಂಗಳವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸೋಲುವ ತಂಡ ಐಪಿಎಲ್ನಿಂದ ಹೊರಬೀಳಲಿದೆ.
Updated on:May 21, 2024 | 1:07 PM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸಜ್ಜಾಗಿ ನಿಂತಿವೆ. ಮೆ 22 ರಂದು ಅಹಮದಾಬಾದ್ನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಈ ಮ್ಯಾಚ್ನಲ್ಲಿ ಗೆದ್ದ ತಂಡವು 2ನೇ ಕ್ವಾಲಿಫೈಯರ್ಗೆ ಪ್ರವೇಶಿಸಲಿದೆ. ಹಾಗೆಯೇ ಸೋತ ತಂಡ ಐಪಿಎಲ್ನಿಂದ ಹೊರಬೀಳಲಿದೆ.

ಹೀಗಾಗಿ ಚೊಚ್ಚಲ ಪ್ರಶಸ್ತಿ ಕನಸು ಹೊತ್ತಿರುವ ಆರ್ಸಿಬಿ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲ್ಲಲೇಬೇಕು. ಇತ್ತ ರಾಯಲ್ ಚಾಲೆಂಜರ್ಸ್ ತಂಡವು ರಾಯಲ್ಸ್ ವಿರುದ್ಧ ಗೆಲ್ಲುವ ವಿಶ್ವಾಸವನ್ನೂ ಸಹ ಹೊಂದಿದೆ. ಇದಕ್ಕೆ ಕಾರಣ ಈ ಹಿಂದಿನ ಅಂಕಿ ಅಂಶಗಳು.

ಅಂದರೆ ಆರ್ಸಿಬಿ ಮತ್ತು ಆರ್ಆರ್ ಒಟ್ಟು 31 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ರಾಜಸ್ಥಾನ್ ರಾಯಲ್ಸ್ ತಂಡ ಗೆದ್ದಿರುವುದು ಕೇವಲ 13 ಬಾರಿ ಮಾತ್ರ. ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15 ಬಾರಿ ಗೆಲುವು ದಾಖಲಿಸಿದೆ. ಅಂದರೆ ಇಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ಸಿಬಿ ಮೇಲುಗೈ ಹೊಂದಿರುವುದು ಸ್ಪಷ್ಟ.

ಇನ್ನು ಪ್ಲೇಆಫ್ ಹಂತದಲ್ಲಿ ಆರ್ಸಿಬಿ ಮತ್ತು ಆರ್ಆರ್ ತಂಡಗಳು ಒಂದು ಬಾರಿ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಿದೆ. 2015 ರಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 71 ರನ್ಗಳಿಂದ ಸೋಲಿಸಿ ಆರ್ಸಿಬಿ ದ್ವಿತೀಯ ಕ್ವಾಲಿಫೈಯರ್ಗೆ ಪ್ರವೇಶಿಸಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಈ ಬಾರಿ ಕೂಡ ಆರ್ಆರ್ ವಿರುದ್ಧ ಆರ್ಸಿಬಿ ತಂಡವೇ ಗೆಲ್ಲುವ ಫೇವರೇಟ್ ಆಗಿ ಗುರುತಿಸಿಕೊಂಡಿದೆ.

ಅದರಂತೆ ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್ಸಿಬಿ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು ಬಗ್ಗು ಬಡಿದು, 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದು ಫೈನಲ್ಗೆ ಪ್ರವೇಶಿಸಲಿದೆಯಾ ಕಾದು ನೋಡಬೇಕಿದೆ.
Published On - 1:07 pm, Tue, 21 May 24




