- Kannada News Photo gallery Cricket photos IPL 2024: Rohit Sharma completed 100 sixes at Wankhede in T20 history
Rohit Sharma: ವಾಂಖೆಡೆಯಲ್ಲಿ ಹಿಸ್ಟರಿ ಬರೆದ ಹಿಟ್ಮ್ಯಾನ್
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ತಮ್ಮ ಆರ್ಭಟವನ್ನು ಮುಂದುವರೆಸಿದ್ದಾರೆ. ಅದ್ಭುತ ಫಾರ್ಮ್ನಲ್ಲಿರುವ ಹಿಟ್ಮ್ಯಾನ್ ಆರ್ಸಿಬಿ ವಿರುದ್ಧ 3 ಸಿಕ್ಸ್ ಸಿಡಿಸುವ ಮೂಲಕ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದು, ಈ ಮೂಲಕ ಈ ಸಾಧನೆ ಮಾಡಿದ 2ನೇ ಭಾರತೀಯ ಎನಿಸಿಕೊಂಡಿದ್ದಾರೆ.
Updated on: Apr 13, 2024 | 7:33 AM

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ (Rohit Sharma) ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಈ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಇದೀಗ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ತವರು ಮೈದಾನದಲ್ಲಿ ಸಿಕ್ಸರ್ಗಳ ಸುರಿಮಳೆಗೈಯ್ಯುವ ಮೂಲಕ ಎಂಬುದು ವಿಶೇಷ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 25ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 8 ವಿಕೆಟ್ ಕಳೆದುಕೊಂಡು 196 ರನ್ ಕಲೆಹಾಕಿತು.

197 ರನ್ಗಳ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ 24 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 38 ರನ್ ಬಾರಿಸಿದ್ದರು. ಈ ಮೂರು ಸಿಕ್ಸರ್ಗಳೊಂದಿಗೆ ವಾಂಖೆಡೆ ಸ್ಟೇಡಿಯಂನಲ್ಲಿ 100 ಸಿಕ್ಸ್ಗಳನ್ನು ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.

ಅಲ್ಲದೆ ಒಂದೇ ಸ್ಟೇಡಿಯಂನಲ್ಲಿ 100 ಸಿಕ್ಸ್ಗಳನ್ನು ಸಿಡಿಸಿದ 2ನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇದಕ್ಕೂ ಮುನ್ನ ಇಂತಹದೊಂದು ಅಪರೂಪದ ದಾಖಲೆಯನ್ನು ವಿರಾಟ್ ಕೊಹ್ಲಿ ಬರೆದಿದ್ದಾರೆ.

ಕಿಂಗ್ ಕೊಹ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇದುವರೆಗೆ 114 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಈ ಮೂಲಕ ಒಂದೇ ಸ್ಟೇಡಿಯಂನಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದೀಗ ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

ಇದೀಗ ರೋಹಿತ್ ಶರ್ಮಾ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 100 ಸಿಕ್ಸ್ಗಳನ್ನು ಪೂರೈಸಿದ್ದಾರೆ. ಅಲ್ಲದೆ ಮುಂಬರುವ ಪಂದ್ಯಗಳಲ್ಲಿ 3 ಸಿಕ್ಸ್ಗಳನ್ನು ಬಾರಿಸಿದರೆ ಟಿ20 ಕ್ರಿಕೆಟ್ನಲ್ಲಿ 500 ಸಿಕ್ಸರ್ಗಳನ್ನು ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಆರ್ಸಿಬಿ ನೀಡಿದ 197 ರನ್ಗಳ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 15.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 199 ರನ್ಗಳಿಸಿ, 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದೆ.
























