
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17ರ 33ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ರೋಹಿತ್ ಶರ್ಮಾ (Rohit Sharma) ವಿಶೇಷ ದಾಖಲೆ ಬರೆಯಲಿದ್ದಾರೆ. ಅದು ಕೂಡ 250 ಪಂದ್ಯಗಳ ಮೂಲಕ ಎಂಬುದು ವಿಶೇಷ.

ಅಂದರೆ ಗುರುವಾರ (ಏ.18) ನಡೆಯಲಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಕಣಕ್ಕಿಳಿದರೆ, ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 250 ಪಂದ್ಯಗಳನ್ನಾಡಿದ 2ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮಹೇಂದ್ರ ಸಿಂಗ್ ಧೋನಿ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರೈಸಿಂಗ್ ಪುಣೆ ಜೈಂಟ್ಸ್ ತಂಡಗಳ ಪರ ಒಟ್ಟು 256 ಪಂದ್ಯಗಳನ್ನಾಡುವ ಮೂಲಕ ಎಂಎಸ್ ಧೋನಿ ಈ ವಿಶೇಷ ದಾಖಲೆ ಬರೆದಿದ್ದಾರೆ.

ಡೆಕ್ಕನ್ ಚಾರ್ಜರ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪರ ಒಟ್ಟು 249 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದರೆ 250 ಐಪಿಎಲ್ ಮ್ಯಾಚ್ಗಳನ್ನಾಡಿದ ವಿಶೇಷ ಸಾಧನೆ ಮಾಡಲಿದ್ದಾರೆ. ಈ ಮೂಲಕ ಧೋನಿ ಬಳಿಕ ಈ ದಾಖಲೆ ಬರೆದ ಎರಡನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಈ ಪಟ್ಟಿಯಲ್ಲಿ ದಿನೇಶ್ ಕಾರ್ತಿಕ್ ಮೂರನೇ ಸ್ಥಾನದಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಲಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಕಿಂಗ್ ಇಲೆವೆನ್ ಪಂಜಾಬ್, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಡಿಕೆ ಒಟ್ಟು 249 ಪಂದ್ಯಗಳನ್ನಾಡಿದ್ದಾರೆ.

ಹಾಗೆಯೇ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಐಪಿಎಲ್ ಆರಂಭದಿಂದಲೂ ಆರ್ಸಿಬಿ ಪರ ಮಾತ್ರ ಕಣಕ್ಕಿಳಿಯುತ್ತಿರುವ ವಿರಾಟ್ ಕೊಹ್ಲಿ ಒಟ್ಟು 244 ಪಂದ್ಯಗಳನ್ನಾಡಿದ್ದಾರೆ. ಅಂದರೆ ಈ ಬಾರಿ ಐಪಿಎಲ್ ಮೂಲಕ ಕಿಂಗ್ ಕೊಹ್ಲಿ ಕೂಡ 250 ಪಂದ್ಯಗಳ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.