ಯುಎಸ್ಎನಲ್ಲಿ ನಡೆಯಲಿರುವ ಮೇಜರ್ ಲೀಗ್ ಕ್ರಿಕೆಟ್ (MLC) ಟೂರ್ನಿಯ 2ನೇ ಸೀಸನ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwel) ಕಣಕ್ಕಿಳಿಯಲಿದ್ದಾರೆ. ಅದು ಕೂಡ ಸ್ಟೀವ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ ಜೊತೆ ಎಂಬುದು ವಿಶೇಷ. ಅಂದರೆ ಮುಂಬರುವ MLC ಲೀಗ್ನಲ್ಲಿ ಮ್ಯಾಕ್ಸ್ವೆಲ್ ವಾಷಿಂಗ್ಟನ್ ಫ್ರೀಡಂ ತಂಡದ ಪರ ಆಡಲಿದ್ದಾರೆ.
ಕಳೆದ ಸೀಸನ್ನಲ್ಲಿ ವಾಷಿಂಗ್ಟನ್ ಫ್ರೀಡಂ ತಂಡವನ್ನು ಆಸ್ಟ್ರೇಲಿಯಾ ಆಟಗಾರ ಮೊಯ್ಸೆಸ್ ಹೆನ್ರಿಕ್ಸ್ ಮುನ್ನಡೆಸಿದ್ದರು. ಇದೀಗ 2ನೇ ಆವೃತ್ತಿಗೂ ಮುನ್ನ ತಂಡಕ್ಕೆ ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಈ ಬಾರಿ ನಾಯಕತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ.
ಹಾಗೆಯೇ ಈ ಬಾರಿ ವಾಷಿಂಗ್ಟನ್ ಫ್ರೀಡಂ ತಂಡದ ಮುಖ್ಯ ಕೋಚ್ ಆಗಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಆಯ್ಕೆಯಾಗಿದ್ದಾರೆ. ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪಾಂಟಿಂಗ್, ಇದೀಗ ಅಮೆರಿಕನ್ ಟಿ20 ಲೀಗ್ಗಾಗಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರನ್ನು ಒಳಗೊಂಡಂತೆ ಬಲಿಷ್ಠ ಟೀಮ್ ಅನ್ನು ರೂಪಿಸಿಕೊಂಡಿದ್ದಾರೆ.
ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿದೆ. ವಿಶೇಷ ಎಂದರೆ ಈ ಆರು ತಂಡಗಳಲ್ಲಿ 4 ಟೀಮ್ಗಳು ಐಪಿಎಲ್ ಫ್ರಾಂಚೈಸಿಗಳ ಮಾಲೀಕತ್ವದಲ್ಲಿದೆ. ಹಾಗೆಯೇ ಮತ್ತೆರಡು ತಂಡಗಳನ್ನೂ ಸಹ ಭಾರತೀಯರೇ ಖರೀದಿಸಿದ್ದಾರೆ.
ಟೆಕ್ಸಾಸ್ ಸೂಪರ್ ಕಿಂಗ್ಸ್ (ಚೆನ್ನೈ ಸೂಪರ್ ಕಿಂಗ್ಸ್), MI ನ್ಯೂಯಾರ್ಕ್ (ಮುಂಬೈ ಇಂಡಿಯನ್ಸ್), ಲಾಸ್ ಏಂಜಲೀಸ್ ನೈಟ್ ರೈಡರ್ಸ್ (ಕೋಲ್ಕತ್ತಾ ನೈಟ್ ರೈಡರ್ಸ್), ಮತ್ತು ಸಿಯಾಟಲ್ ಓರ್ಕಾಸ್ (ಡೆಲ್ಲಿ ಕ್ಯಾಪಿಟಲ್ಸ್) ತಂಡಗಳು ಐಪಿಎಲ್ ಫ್ರಾಂಚೈಸಿಗಳ ಒಡೆತನದಲ್ಲಿದೆ. ಇನ್ನು ಸ್ಯಾನ್ ಫ್ರಾನ್ಸಿಸ್ಕೊ ಮತ್ತು ವಾಷಿಂಗ್ಟನ್ ಫ್ರೀಡಂ ತಂಡಗಳು ಭಾರತೀಯ ಮೂಲದ ಉದ್ಯಮಿಗಳಾದ ಆನಂದ್ ರಾಜರಾಮನ್ ಹಾಗೂ ಸಂಜಯ್ ಗೋವಿಲ್ ಖರೀದಿಸಿದ್ದಾರೆ.
2023 ರಲ್ಲಿ ನಡೆದ ಚೊಚ್ಚಲ ಆವೃತ್ತಿಯಲ್ಲಿ ನಿಕೋಲಸ್ ಪೂರನ್ ನಾಯಕತ್ವದ ಎಂಐ ನ್ಯೂಯಾರ್ಕ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಫೈನಲ್ ಪಂದ್ಯದಲ್ಲಿ ಸಿಯಾಟಲ್ ಓರ್ಕಾಸ್ ವಿರುದ್ಧ 7 ವಿಕೆಟ್ಗಳ ಜಯ ಸಾಧಿಸುವ ಮೂಲಕ MI ನ್ಯೂಯಾರ್ಕ್ ಎಂಎಲ್ಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಇದೀಗ ದ್ವಿತೀಯ ಸೀಸನ್ಗಾಗಿ 6 ತಂಡಗಳು ಸಜ್ಜಾಗುತ್ತಿದ್ದು, ಜುಲೈ ಅಥವಾ ಆಗಸ್ಟ್ನಲ್ಲಿ ಈ ಟೂರ್ನಿ ನಡೆಯುವ ಸಾಧ್ಯತೆಯಿದೆ.
Published On - 12:52 pm, Thu, 18 April 24