- Kannada News Photo gallery Cricket photos IPL 2024: Sunil Narine overtakes Klaasen for most sixes list
IPL 2024: ಸಿಕ್ಸರ್ ಸರದಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಸುನಿಲ್ ನರೈನ್
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್ 2024) ಭಾನುವಾರ ನಡೆದ ದ್ವಿತೀಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೆಕೆಆರ್ ತಂಡ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು ಸುನಿಲ್ ನರೈನ್ (81) ಅವರ ಅರ್ಧಶತಕದ ನೆರವಿನಿಂದ 235 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೇವಲ 137 ರನ್ಗಳಿಗೆ ಆಲೌಟ್ ಆಗಿದೆ.
Updated on: May 06, 2024 | 8:06 AM

ಐಪಿಎಲ್ (IPL 2024) ಸೀಸನ್ 17ರ 54ನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಸುನಿಲ್ ನರೈನ್ ಸಿಕ್ಸರ್ ಸರದಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಏಕಾನ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಈ ಪಂದ್ಯದಲ್ಲಿ ಕೆಕೆಆರ್ ಪರ ನರೈನ್ ಆರಂಭಿಕರಾಗಿ ಕಣಕ್ಕಿಳಿದಿದ್ದರು.

ಮೊದಲ ಓವರ್ನಿಂದ ವಿಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ನರೈನ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಈ ಮೂಲಕ ಕೇವಲ 39 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 81 ರನ್ ಬಾರಿಸಿ ಔಟಾದರು.

ಈ 7 ಸಿಕ್ಸ್ಗಳೊಂದಿಗೆ ಈ ಬಾರಿಯ ಐಪಿಎಲ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಸುನಿಲ್ ನರೈನ್ ಅಗ್ರಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಮೊದಲ ಸ್ಥಾನದಲ್ಲಿ ಎಸ್ಆರ್ಹೆಚ್ ತಂಡದ ದಾಂಡಿಗ ಹೆನ್ರಿಕ್ ಕ್ಲಾಸೆನ್ ಇದ್ದರು.

ಸನ್ರೈಸರ್ಸ್ ಹೈದರಾಬಾದ್ ಪರ 10 ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿರುವ ಹೆನ್ರಿಕ್ ಕ್ಲಾಸೆನ್ ಈವರೆಗೆ ಒಟ್ಟು 31 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಇದೀಗ ಈ ಸಿಕ್ಸ್ಗಳ ಸಂಖ್ಯೆಯನ್ನು ದಾಟುವಲ್ಲಿ ನರೈನ್ ಯಶಸ್ವಿಯಾಗಿದ್ದಾರೆ.

ಕೆಕೆಆರ್ ಪರ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಸುನಿಲ್ ನರೈನ್ 11 ಇನಿಂಗ್ಸ್ಗಳಲ್ಲಿ ಬರೋಬ್ಬರಿ 32 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್ನಲ್ಲಿ ಅತೀ ಹೆಚ್ಚು ಸಿಕ್ಸ್ಗಳನ್ನು ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಸಿಕ್ಸ್ಗಳಲ್ಲದೇ ನರೈನ್ ಬ್ಯಾಟ್ನಿಂದ 46 ಫೋರ್ಗಳು ಕೂಡ ಮೂಡಿ ಬಂದಿದೆ. ಈ ಮೂಲಕ ಒಟ್ಟು 461 ರನ್ ಕಲೆಹಾಕಿರುವ ಸುನಿಲ್ ನರೈನ್ ಐಪಿಎಲ್ 2024 ರ ರನ್ ಸರದಾರರ ಪಟ್ಟಿಯಲ್ಲೂ ಮೂರನೇ ಸ್ಥಾನಕ್ಕೇರಿದ್ದಾರೆ.
