
ಟಿ20 ಕ್ರಿಕೆಟ್ನ ಹೊಡಿಬಡಿ ದಾಂಡಿಗ ಸೂರ್ಯಕುಮಾರ್ ಯಾದವ್ (Suryakumar Yadav) ಇದೀಗ ಸಂಪೂರ್ಣ ಫಿಟ್ನೆಸ್ ಸಾಧಿಸಿದ್ದಾರೆ. ಅಷ್ಟೇ ಅಲ್ಲದೆ ಶುಕ್ರವಾರ ಅವರು ಮುಂಬೈ ಇಂಡಿಯನ್ಸ್ ಕ್ಯಾಂಪ್ ಸೇರಲಿದ್ದಾರೆ. ಇದರೊಂದಿಗೆ ಮುಂದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯುವುದು ಕೂಡ ಖಚಿತವಾಗಿದೆ.

ಸೂರ್ಯಕುಮಾರ್ ಯಾದವ್ ಕಳೆದ ತಿಂಗಳು ಸ್ಪೋರ್ಟ್ಸ್ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ, ಅವರು ಮುಂಬೈ ಇಂಡಿಯನ್ಸ್ ತಂಡದ ಮೊದಲ ಮೂರು ಪಂದ್ಯಗಳಿಗೆ ಅಲಭ್ಯರಾಗಿದ್ದರು.

ಇದೀಗ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಿಂದ ಫಿಟ್ನೆಸ್ ಸರ್ಟಿಫಿಕೇಟ್ ಪಡೆದಿರುವ ಸೂರ್ಯಕುಮಾರ್ ಯಾದವ್ ಏಪ್ರಿಲ್ 5 ರಂದು ಮುಂಬೈ ಇಂಡಿಯನ್ಸ್ ಬಳಗವನ್ನು ಸೇರಿಕೊಳ್ಳಲಿದ್ದಾರೆ. ಈ ಮೂಲಕ ಮುಂದಿನ ಪಂದ್ಯಕ್ಕಾಗಿ ಭರ್ಜರಿ ತಾಲೀಮು ನಡೆಸಲಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡವು ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 7 ರಂದು ಆಡಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳುತ್ತಿರುವುದು ಶುಭ ಸೂಚನೆ ಎನ್ನಬಹುದು.

ಇನ್ನು ಸೂರ್ಯಕುಮಾರ್ ಯಾದವ್ ಆಗಮನದಿಂದಾಗಿ ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್ನಲ್ಲಿ ಒಂದು ಬದಲಾವಣೆ ಕಂಡು ಬರಲಿದೆ. ಅದರಂತೆ ಕಳೆದ ಮೂರು ಪಂದ್ಯಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದ ಯುವ ದಾಂಡಿಗ ನಮನ್ ಧೀರ್ ಆಡುವ ಬಳಗದಿಂದ ಹೊರಬೀಳಲಿದ್ದು, ಅವರ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯಲಿದ್ದಾರೆ.