ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್ಗಳ ಹೀನಾಯ ಸೋಲು ಕಂಡ ಬಳಿಕ ಲಕ್ನೋ ಸೂಪರ್‌ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ರನ್ನು ತಂಡದ ಮಾಲೀಕ ಸಂಜೀವ್ ಗೋಯೆಂಕಾ ಬಹಿರಂಗವಾಗೆ ನಿಂಧಿಸಿದ್ದರು. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಈ ವೈರಲ್ ವಿಡಿಯೋದ ಬಗ್ಗೆ ಒಬ್ಬೋಬ್ಬರು ಒಂದೊಂದು ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಭಿಮಾನಿಗಳಿಂದ ಹಿಡಿದು ಕ್ರಿಕೆಟ್ ಪಂಡಿತರು ಕೂಡ ಸಂಜೀವ್ ಗೋಯೆಂಕಾ ಅವರ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಜೊತೆಗೆ ರಾಹುಲ್ರನ್ನು ಕೂಡಲೇ ತಂಡ ತೊರೆಯುವಂತೆ ಮನವಿ ಮಾಡಿದ್ದಾರೆ.
ಇದೆಲ್ಲದರ ನಡುವೆ ಇದೀಗ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ, ಸಂಜೀವ್ ಗೋಯೆಂಕಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಸ್ತುತ ಇಂಜುರಿಯಿಂದಾಗಿ ವಿಶ್ರಾಂತಿಯಲ್ಲಿರುವ ಶಮಿ, ಐಪಿಎಲ್ ಜೊತೆಗೆ ಟಿ20 ವಿಶ್ವಕಪ್ನಿಂದಲೂ ಹೊರಬಿದ್ದಿದ್ದಾರೆ. ಅದಾಗ್ಯೂ ತ್ವರಿತವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಕ್ರಿಕ್‌ಬಜ್ ಲೈವ್‌ನಲ್ಲಿ ಸಂಜೀವ್ ಗೋಯೆಂಕಾ ಅವರ ನಡೆಯ ಬಗ್ಗೆ ಅಸಮಾಧಾನ ಹೊರಹಾಕಿರುವ ಶಮಿ, ನಿಮ್ಮನ್ನು ಕೋಟಿಗಟ್ಟಲೆ ಜನ ನೋಡುತ್ತಿರುತ್ತಾರೆ. ಕ್ಯಾಮೆರಾ ಮುಂದೆ ಇಂತಹ ಘಟನೆಗಳು ನಡೆದರೆ ಮತ್ತು ಇದರ ದೃಶ್ಯ ಪರದೆಯ ಮೇಲೆ ಕಂಡುಬಂದರೆ ಅದು ತುಂಬಾ ನಾಚಿಕೆಗೇಡಿನ ಸಂಗತಿ. ಮಾತನಾಡುವುದಕ್ಕೂ ಮಿತಿ ಇರಬೇಕು. ಇದರಿಂದ ತುಂಬಾ ತಪ್ಪು ಸಂದೇಶ ರವಾನೆಯಾಗುತ್ತದೆ.
ಎಲ್ಲೆಡೆ ಆಟಗಾರರನ್ನು ಗೌರವಿಸಲಾಗುತ್ತದೆ. ಮಾಲೀಕರಾಗಿ ನೀವು ಸಹ ಗೌರವಾನ್ವಿತ ವ್ಯಕ್ತಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ಇದನ್ನು ಡ್ರೆಸ್ಸಿಂಗ್ ಕೋಣೆಯಲ್ಲಿ ಅಥವಾ ತಂಡದ ಹೋಟೆಲ್‌ನಲ್ಲಿ ಮಾಡಬಹುದಾಗಿತ್ತು. ಆದರೆ ಇದನ್ನು ಮೈದಾನದಲ್ಲಿ ಮಾಡುವ ಅಗತ್ಯವಿರಲಿಲ್ಲ ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಮುಂದುವರೆದು ಮಾತನಾಡಿದ ಶಮಿ, ಕೆಎಲ್ ರಾಹುಲ್ ಒಬ್ಬ ನಾಯಕ, ಸಾಮಾನ್ಯ ಆಟಗಾರನಲ್ಲ. ಕ್ರಿಕೆಟ್ ಒಂದು ತಂಡದ ಕ್ರೀಡೆ. ತಂತ್ರವು ಯಶಸ್ವಿಯಾಗದಿದ್ದರೆ ಅದು ದೊಡ್ಡ ವಿಷಯವಲ್ಲ. ಆಟದಲ್ಲಿ ಏನು ಬೇಕಾದರೂ ಆಗಬಹುದು. ಪ್ರತಿ ಆಟಕ್ಕೂ ಒಳ್ಳೆಯ ಮತ್ತು ಕೆಟ್ಟ ದಿನಗಳಿರುತ್ತವೆ.
ಆಟದಲ್ಲಿ ಹಲವು ಬಾರಿ ಉದ್ವಿಗ್ನತೆಯ ಕ್ಷಣಗಳು ಇರುತ್ತವೆ. ಆಟಗಾರರು ಸಹ ಪರಸ್ಪರ ಬೈದಾಡಿಕೊಳ್ಳುತ್ತಾರೆ. ಕ್ರಿಕೆಟ್ ಮಾತ್ರವಲ್ಲ, ಎಲ್ಲಾ ಕ್ರೀಡೆಗಳಲ್ಲೂ ಇದು ನಡೆಯುತ್ತದೆ. ಒಬ್ಬ ಆಟಗಾರ ಇನ್ನೊಬ್ಬ ಆಟಗಾರನೊಂದಿಗೆ ಈ ರೀತಿಯಾಗಿ ನಡೆದುಕೊಳ್ಳುವುದು ಸಹಜ. ಆದರೆ ಹೊರಗಿನಿಂದ ಯಾರಾದರೂ ಆಟಗಾರರೊಂದಿಗೆ ಈ ರೀತಿ ಮಾತನಾಡುವುದು ತರವಲ್ಲ ಎಂದು ಶಮಿ ಅಸಮಾಧಾನ ಹೊರಹಾಕಿದ್ದಾರೆ.
Published On - 5:52 pm, Fri, 10 May 24