Updated on: Jul 16, 2023 | 7:26 PM
IPL 2024: ಐಪಿಎಲ್ ಸೀಸನ್ 17 ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ತಂಡಕ್ಕೆ ಮೇಜರ್ ಸರ್ಜರಿಯಾಗುವುದು ಬಹುತೇಕ ಖಚಿತವಾಗಿದೆ. ಇದರ ಮೊದಲ ಹೆಜ್ಜೆಯಾಗಿ ತಂಡದ ಸಿಬ್ಬಂದಿ ವರ್ಗಗಳನ್ನು ಬದಲಿಸಲು ಆರ್ಸಿಬಿ ಫ್ರಾಂಚೈಸಿ ನಿರ್ಧರಿಸಿದೆ ಎಂದು ವರದಿಯಾಗಿದೆ.
ಅದರಂತೆ ಆರ್ಸಿಬಿ ತಂಡದ ಮುಖ್ಯ ಕೋಚ್ ಸಂಜಯ್ ಬಂಗಾರ್ ಅವರನ್ನು ಬದಲಿಸಲು ಫ್ರಾಂಚೈಸಿ ನಿರ್ಧರಿಸಲಾಗಿದೆ. ಹಾಗೆಯೇ ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಅವರನ್ನು ಕೂಡ ಕೈ ಬಿಡಲು ತೀರ್ಮಾನಿಸಲಾಗಿದೆ.
ಹೀಗಾಗಿ ಐಪಿಎಲ್ 2024 ರಲ್ಲಿ ಆರ್ಸಿಬಿ ತಂಡದಲ್ಲಿ ಹೊಸ ಕೋಚ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಇದಕ್ಕಾಗಿ ಈಗಾಗಲೇ ಆರ್ಸಿಬಿ ಫ್ರಾಂಚೈಸಿ ಕೆಲ ಕೋಚ್ಗಳನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದು ಬಂದಿದೆ.
2019 ರಿಂದ ಆರ್ಸಿಬಿ ತಂಡದ ಭಾಗವಾಗಿರುವ ಮೈಕ್ ಹೆಸ್ಸನ್ ಅವರ ಕಾರ್ಯಾವಧಿ ಈ ವರ್ಷಕ್ಕೆ ಕೊನೆಗೊಳ್ಳಲಿದ್ದು, ಹೀಗಾಗಿ ನಿರ್ದೇಶಕನ ಸ್ಥಾನದಿಂದ ಅವರನ್ನು ಕೆಳಗಿಸಲು ನಿರ್ಧರಿಸಲಾಗಿದೆ.
ಹಾಗೆಯೇ 2022 ರಿಂದ ಆರ್ಸಿಬಿ ತಂಡದ ಕೋಚ್ ಆಗಿ ಕಾಣಿಸಿಕೊಂಡಿರುವ ಸಂಜಯ್ ಬಂಗಾರ್ ಅವರ ಕಾರ್ಯ ನಿರ್ವಹಣೆ ಬಗ್ಗೆ ಆರ್ಸಿಬಿ ಫ್ರಾಂಚೈಸಿ ಸಂತುಷ್ಟರಾಗಿಲ್ಲ. ಹೀಗಾಗಿ ಮುಂದಿನ ಸೀಸನ್ ಐಪಿಎಲ್ಗಾಗಿ ಅವರ ಜೊತೆಗಿನ ಒಪ್ಪಂದವನ್ನು ಇನ್ನೂ ಕೂಡ ನವೀಕರಿಸಿಲ್ಲ. ಹೀಗಾಗಿ ಸಂಜಯ್ ಬಂಗಾರ್ ಕೂಡ ಆರ್ಸಿಬಿ ತಂಡದಿಂದ ಹೊರಬೀಳಲಿದ್ದಾರೆ.
2016 ರಲ್ಲಿ ಕೊನೆಯ ಬಾರಿಗೆ ಫೈನಲ್ ಪ್ರವೇಶಿಸಿದ್ದ ಆರ್ಸಿಬಿ ಆ ಬಳಿಕ ಮತ್ತೆ ಪ್ರಶಸ್ತಿ ಸುತ್ತಿಗೆ ತಲುಪಿರಲಿಲ್ಲ. ಇನ್ನು 2020, 2021 ಹಾಗೂ 2022 ರಲ್ಲಿ ಪ್ಲೇಆಫ್ ಆಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತು.
ಹೀಗಾಗಿಯೇ ಆರ್ಸಿಬಿ ಫ್ರಾಂಚೈಸಿ ತಂಡಕ್ಕೆ ಮೇಜರ್ ಸರ್ಜರಿ ಮಾಡಲು ನಿರ್ಧರಿಸಿದೆ. ಅದರ ಮೊದಲ ಭಾಗವಾಗಿ ಇದೀಗ ಕೋಚ್ ಹಾಗೂ ಇತರೆ ಸಿಬ್ಬಂದಿಗಳ ಬದಲಾವಣೆಗೆ ಮುಂದಾಗಿದೆ.
ಹೀಗಾಗಿ ಐಪಿಎಲ್ ಸೀಸನ್ 17 ಆರಂಭಕ್ಕೂ ಮುನ್ನವೇ ಆರ್ಸಿಬಿ ತಂಡದಿಂದ ಕೆಲ ಆಟಗಾರರು ಹೊರಬೀಳುವುದು ಖಚಿತ. ಈ ಪಟ್ಟಿಯಲ್ಲಿ ಸ್ಟಾರ್ ಆಟಗಾರರು ಸ್ಥಾನ ಪಡೆಯಲಿದ್ದಾರಾ ಕಾದು ನೋಡಬೇಕಿದೆ.
Published On - 7:24 pm, Sun, 16 July 23