ಬೆನ್ನು ನೋವಿನಿಂದಾಗಿ ಕಳೆದ ಒಂದು ವರ್ಷದಿಂದ ಟೀಂ ಇಂಡಿಯಾದಿಂದ ಹೊರಗುಳಿದಿರು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತೆ ತಂಡಕ್ಕೆ ಎಂಟ್ರಿಕೊಡುವ ಕಾಲ ಸನಿಹವಾಗಿದೆ.
ಸೆಪ್ಟೆಂಬರ್ 2022 ರಿಂದ ತಂಡದಿಂದ ಹೊರಗುಳಿದಿರುವ ಬುಮ್ರಾ, ಕಳೆದ ಬಾರಿಯ ಏಷ್ಯಾಕಪ್, ಟಿ20 ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಂತಹ ಪ್ರಮುಖ ಟೂರ್ನಿಗಳಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದರು.
ಹೀಗಾಗಿ ಕೆಲವು ತಿಂಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬುಮ್ರಾ ಅಂದಿನಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಿಹ್ಯಾಬ್ಗೆ ಒಳಗಾಗುತ್ತಿದ್ದಾರೆ. ನಿಧಾನವಾಗಿ ಫಿಟ್ನೆಸ್ ಪಡೆಯುತ್ತಿರುವ ಬುಮ್ರಾ ಕೆಲ ದಿನಗಳ ಹಿಂದೆ ಬೌಲಿಂಗ್ ಆರಂಭಿಸಿದ್ದರು. ಇದಕ್ಕೂ ಮೊದಲು ಬುಮ್ರಾ ಪ್ರತಿದಿನ 6 ರಿಂದ 7 ಓವರ್‌ಗಳನ್ನು ಬೌಲ್ ಮಾಡುತ್ತಿದ್ದರು.
ಈಗ ಆಂಗ್ಲ ಪತ್ರಿಕೆ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯಲ್ಲಿ, ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಯಾವುದೇ ಸಮಸ್ಯೆ ಎದುರಿಸುತ್ತಿಲ್ಲ. ಆದ್ದರಿಂದ ಅವರು ಪೂರ್ಣ ವೇಗದಲ್ಲಿ ಬೌಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ ದಿನಕ್ಕೆ 8 ರಿಂದ 10 ಓವರ್‌ಗಳನ್ನು ಬೌಲ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಸದ್ಯ ಫಿಟ್ನೇಸ್ನಲ್ಲಿ ಸುಧಾರಿಸುತ್ತಿರುವ ಬುಮ್ರಾ ಏಷ್ಯಾಕಪ್ಗೂ ಮುನ್ನ ಮುಂದಿನ ತಿಂಗಳ ಐರ್ಲೆಂಡ್ ಪ್ರವಾಸದಲ್ಲಿ ತಂಡದಲ್ಲಿ ಕಾಣಿಸಿಕೊಳ್ಳುವುದು ಭಾಗಶಃ ಖಚಿತವಾಗಿದೆ. ಈ ಪ್ರವಾಸದಲ್ಲಿ ಭಾರತ 3 ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿದೆ.
ಇಂತಹ ಪರಿಸ್ಥಿತಿಯಲ್ಲಿ, ಆಗಸ್ಟ್ 31 ರಂದು ಪ್ರಾರಂಭವಾಗುವ ಏಷ್ಯಾ ಕಪ್ ಮೊದಲು, ಬುಮ್ರಾ ಪಂದ್ಯದ ಫಿಟ್ನೆಸ್ ಮತ್ತು ಅವರ ಲಯವನ್ನು ಮರಳಿ ಪಡೆಯುವ ಅವಕಾಶವನ್ನು ಪಡೆಯಬಹುದು.
ಬುಮ್ರಾ ಐರ್ಲೆಂಡ್ ಪ್ರವಾಸದಲ್ಲಿ ಆಡಿದರೆ, ಏಷ್ಯಾಕಪ್ ಅನ್ನು ಸಂಪೂರ್ಣ ಫಿಟ್ನೆಸ್‌ನೊಂದಿಗೆ ಆಡಲು ಸಾಧ್ಯವಾದರೆ, ಅದು ಟೀಂ ಇಂಡಿಯಾಕ್ಕೆ ದೊಡ್ಡ ರಿಲೀಫ್ ಆಗಲಿದೆ. ಏಕೆಂದರೆ ಅಕ್ಟೋಬರ್ 5 ರಿಂದ ಭಾರತದಲ್ಲಿ ಪ್ರಾರಂಭವಾಗಲಿರುವ ಏಕದಿನ ವಿಶ್ವಕಪ್ಗೆ ಟೀಂ ಇಂಡಿಯಾಗೆ ಆನೆಬಲ ಬಂದಂತ್ತಾಗಲಿದೆ.
Published On - 11:59 am, Sun, 16 July 23