
2025 ರ ಐಪಿಎಲ್‌ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸ್ಫೋಟಕ ಬ್ಯಾಟರ್ನ ಅಗಮನವಾಗಿದೆ ಶುಕ್ರವಾರ, ಏಪ್ರಿಲ್ 18 ರಂದು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಸಿಎಸ್ಕೆ ಫ್ರಾಂಚೈಸಿ, ದಕ್ಷಿಣ ಆಫ್ರಿಕಾದ ಯುವ ದಾಂಡಿಗ ಡೆವಾಲ್ಡ್ ಬ್ರೆವಿಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದಾಗಿ ತಿಳಿಸಿದೆ.

ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್ ಬದಲಿ ಆಟಗಾರನಾಗಿ ಸಿಎಸ್ಕೆ ತಂಡವನ್ನು ಸೇರಿಕೊಂಡಿದ್ದು, ಅವರು ವೇಗಿ ಗುರ್ಜಪಾನಿ ಸಿಂಗ್ ಅವರ ಸ್ಥಾನವನ್ನು ತುಂಬಲಿದ್ದಾರೆ. ವಾಸ್ತವವಾಗಿ ಗುರ್ಜಪಾನಿ ಸಿಂಗ್ ಗಾಯದ ಕಾರಣ ಇಡೀ ಟೂರ್ನಿಯಿಂದ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಬ್ರೆವಿಸ್ ಆಗಮನವಾಗಿದೆ.

ಈ ಸೀಸನ್‌ನಲ್ಲಿ ಚೆನ್ನೈ ತಂಡದ ಬ್ಯಾಟಿಂಗ್ ವಿಭಾಗ ದುರ್ಬಲವಾಗಿ ಕಾಣುತ್ತಿದೆ. ಈ ಕಾರಣದಿಂದಾಗಿ ವೇಗದ ಬೌಲರ್ ಬದಲಿಗೆ ಬ್ಯಾಟ್ಸ್‌ಮನ್‌ನನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಸೀಸನ್‌ನಲ್ಲಿ ಚೆನ್ನೈ ತಂಡವು ದೊಡ್ಡ ಸ್ಕೋರ್ ಗಳಿಸುವಲ್ಲಿ ಅಥವಾ ವೇಗವಾಗಿ ಬ್ಯಾಟಿಂಗ್ ಮಾಡುವಲ್ಲಿ ವಿಫಲವಾಗಿದೆ. ವಿಶೇಷವಾಗಿ ಅಗ್ರ ಕ್ರಮಾಂಕವು ಈ ವಿಷಯದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.

ಇಂತಹ ಪರಿಸ್ಥಿತಿಯಲ್ಲಿ, ಟಿ20 ಸ್ವರೂಪದಲ್ಲಿ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಡೆವಾಲ್ಡ್ ಬ್ರೆವಿಸ್ ಅವರನ್ನು ಚೆನ್ನೈ ತಂಡ ಸೇರಿಸಿಕೊಂಡಿದೆ. ಅವರ ದಾಖಲೆಯೂ ಇದಕ್ಕೆ ಸಾಕ್ಷಿಯಾಗಿದ್ದು, ಈ ಬ್ಯಾಟ್ಸ್‌ಮನ್ ಕೇವಲ 81 ಟಿ20 ಪಂದ್ಯಗಳಲ್ಲಿ 123 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಇಷ್ಟೇ ಅಲ್ಲ, ಬ್ರೆವಿಸ್ ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಇತ್ತೀಚೆಗೆ ಅವರು ಕ್ರಿಕೆಟ್ ದಕ್ಷಿಣ ಆಫ್ರಿಕಾದ ಡಿವಿಷನ್-1 ಟಿ20 ಟೂರ್ನಮೆಂಟ್‌ನ ಕೊನೆಯ 6 ಇನ್ನಿಂಗ್ಸ್‌ಗಳಲ್ಲಿ ಒಂದು ಶತಕ ಮತ್ತು 3 ಅರ್ಧಶತಕಗಳನ್ನು ಬಾರಿಸಿದ್ದಾರೆ. ತಮ್ಮ ಟಿ20 ವೃತ್ತಿಜೀವನದಲ್ಲಿ, ಬ್ರೆವಿಸ್ 145 ರ ಸ್ಟ್ರೈಕ್ ರೇಟ್‌ನಲ್ಲಿ 1787 ರನ್ ಗಳಿಸಿದ್ದಾರೆ.

ಬ್ರೆವಿಸ್ 2022 ರಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್ಗೆ ಪಾದಾರ್ಪಣೆ ಮಾಡಿದರು. ಮೊದಲ ಸೀಸನ್‌ನಲ್ಲಿಯೇ ಅವರು 7 ಪಂದ್ಯಗಳಲ್ಲಿ 142 ಸ್ಟ್ರೈಕ್ ರೇಟ್‌ನಲ್ಲಿ 161 ರನ್ ಗಳಿಸಿದರು. ಆದಾಗ್ಯೂ, 2023 ರಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ. 2024 ರಲ್ಲಿ 3 ಪಂದ್ಯಗಳನ್ನಾಡಿದ್ದ ಅವರು ಕೇವಲ 69 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದರು. ಆ ಬಳಿಕ ಮುಂಬೈ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು.
Published On - 4:26 pm, Fri, 18 April 25