IPL ಇತಿಹಾಸದಲ್ಲೇ ಅತ್ಯಂತ ಹೀನಾಯ ದಾಖಲೆ ಬರೆದ RCB
IPL 2025 RCB vs PBKS: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 34ನೇ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ನಿಗದಿತ 14 ಓವರ್ಗಳಲ್ಲಿ 95 ರನ್ಗಳಿಸಿದರೆ, ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ 12.1 ಓವರ್ಗಳಲ್ಲಿ ಗೆಲುವಿನ ಗುರಿ ಮುಟ್ಟಿದೆ.
Updated on:Apr 19, 2025 | 8:32 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 34ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸೋಲನುಭವಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಆರ್ಸಿಬಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಅದರಲ್ಲೂ ಬ್ಯಾಟ್ ಟು ಬ್ಯಾಕ್ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಆರ್ಸಿಬಿ ಒಂದು ಹಂತದಲ್ಲಿ 63 ರನ್ಗಳಿಗೆ 9 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಟಿಮ್ ಡೇವಿಡ್ ಅರ್ಧಶತಕ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಆರ್ಸಿಬಿ ತಂಡವು ನಿಗದಿತ 14 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 95 ರನ್ ಕಲೆಹಾಕಿತು.

96 ರನ್ಗಳ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿದರೂ, ಆ ಬಳಿಕ ಚೇತರಿಸಿಕೊಂಡಿತು. ಇದರ ನಡುವೆ ಕಣಕ್ಕಿಳಿದ ನೆಹಾಲ್ ವಧೇರಾ ಅತ್ಯುತ್ತಮ ಬ್ಯಾಟಿಂಗ್ನೊಂದಿಗೆ ಅಜೇಯ 33 ರನ್ ಬಾರಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ ಪಡೆ 12.1 ಓವರ್ಗಳಲ್ಲಿ 98 ರನ್ ಬಾರಿಸಿ 5 ವಿಕೆಟ್ಗಳ ಗೆಲುವು ದಾಖಲಿಸಿತು.

ಈ ಸೋಲಿನೊಂದಿಗೆ ಐಪಿಎಲ್ ಇತಿಹಾಸದಲ್ಲೇ ತವರು ಮೈದಾನದಲ್ಲಿ ಅತ್ಯಧಿಕ ಪಂದ್ಯಗಳಲ್ಲಿ ಸೋತ ತಂಡವೆಂಬ ಅಪಕೀರ್ತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದೆ. ಇದಕ್ಕೂ ಮುನ್ನ ಇಂತಹದೊಂದು ಹೀನಾಯ ದಾಖಲೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಸರಿನಲ್ಲಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ತವರು ಮೈದಾನ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಈವರೆಗೆ 84 ಪಂದ್ಯಗಳನ್ನಾಡಿದೆ. ಈ ವೇಳೆ DC ಪಡೆ 45 ಪಂದ್ಯಗಳಲ್ಲಿ ಪರಾಜಯಗೊಂಡಿದೆ. ಈ ಮೂಲಕ ಐಪಿಎಲ್ನಲ್ಲಿ ತವರು ಮೈದಾನದಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಸೋತ ತಂಡವೆಂಬ ಅನಗತ್ಯ ದಾಖಲೆಯೊಂದು ಡೆಲ್ಲಿ ಕ್ಯಾಪಿಟಲ್ಸ್ ನಿರ್ಮಿಸಿತ್ತು.

ಇದೀಗ ಈ ದಾಖಲೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುರಿದೆ. ಆರ್ಸಿಬಿ ತಂಡವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 94 ಪಂದ್ಯಗಳನ್ನು ಆಡಿದೆ. ಈ ವೇಳೆ ಬರೋಬ್ಬರಿ 46 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ತವರು ಮೈದಾನದಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಸೋತ ಅಪಕೀರ್ತಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನದಾಗಿಸಿಕೊಂಡಿದೆ.
Published On - 8:30 am, Sat, 19 April 25



















