- Kannada News Photo gallery Cricket photos IPL 2025: Digvesh Rathi suspended for Gujarat Titans Match
IPL 2025: ಐಪಿಎಲ್ ಪಂದ್ಯದಿಂದ ದಿಗ್ವೇಶ್ ರಾಥಿ ಅಮಾನತು
Digvesh Rathi: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್ 2025) ಅತೀ ಹೆಚ್ಚು ಬಾರಿ ದಂಡ ಕಟ್ಟಿದ್ದು ಲಕ್ನೋ ಸೂಪರ್ ಜೈಂಟ್ಸ್ ತಂಡದ ಯುವ ಸ್ಪಿನ್ನರ್ ದಿಗ್ವೇಶ್ ರಾಥಿ. ನೋಟ್ ಬುಕ್ ಸೆಲೆಬ್ರೇಷನ್ನೊಂದಿಗೆ ಮೈದಾನದಲ್ಲಿ ಸಂಚಲನ ಸೃಷ್ಟಿಸಿದ್ದ ದಿಗ್ವೇಶ್ ಈವರೆಗೆ ಮೂರು ಬಾರಿ ದಂಡ ಕಟ್ಟಿದ್ದಾರೆ. ಅಲ್ಲದೆ ಇದೀಗ ಒಂದು ಪಂದ್ಯದಿಂದ ಅಮಾನತುಗೊಂಡಿದ್ದಾರೆ.
Updated on:May 20, 2025 | 11:14 AM

IPL 2025: ಇಂಡಿಯುನ್ ಪ್ರೀಮಿಯರ್ ಲೀಗ್ನಲ್ಲಿ ಅನುಚಿತ ವರ್ತನೆಯಿಂದಲೇ ಗಮನ ಸೆಳೆದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಪಿನ್ನರ್ ದಿಗ್ವೇಶ್ ರಾಥಿಯನ್ನು (Digvesh Rathi) ಮುಂದಿನ ಪಂದ್ಯದಿಂದ ಅಮಾನತುಗೊಳಿಸಲಾಗಿದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಜೊತೆ ಜಗಳಕ್ಕಿಳಿದಿದ್ದ ರಾಥಿಗೆ ಒಂದು ಪಂದ್ಯದ ನಿಷೇಧ ಹೇರಲಾಗಿದೆ.

ಈ ನಿಷೇಧದೊಂದಿಗೆ ದಿಗ್ವೇಶ್ ರಾಥಿಗೆ ಪಂದ್ಯ ಶುಲ್ಕದ ಶೇ 50 ರಷ್ಟು ದಂಡವನ್ನು ಸಹ ವಿಧಿಸಲಾಗಿದೆ. ಸದ್ಯ ಅವರ ಡಿಮೆರಿಟ್ ಪಾಯಿಂಟ್ 5 ಕ್ಕೇರಿದ್ದು, ಹೀಗಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಿಂದ ದಿಗ್ವೇಶ್ನನ್ನು ಹೊರಗಿಡುವಂತೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೂಚಿಸಲಾಗಿದೆ.

ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡಿದ ಬಳಿಕ ದಿಗ್ವೇಶ್ ರಾಥಿ ನೋಟ್ಬುಕ್ ಸೆಲೆಬ್ರೇಷನ್ನೊಂದಿಗೆ ಬ್ಯಾಟರ್ನನ್ನು ಕೆಣಕಿದ್ದರು. ಈ ಅನುಚಿತ ವರ್ತನೆಗೆ ದಿಗ್ವೇಶ್ಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಗಿತ್ತು. ಅಲ್ಲದೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿತ್ತು.

ಇದಾದ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಮನ್ ಧೀರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಬಳಿಕ ದಿಗ್ವೇಶ್ ನೋಟ್ಬುಕ್ ಸೆಲೆಬ್ರೇಷನ್ ಮಾಡಿದ್ದರು. ಈ ಆಕ್ರೋಶಭರಿತ ಸಂಭ್ರಮಕ್ಕೆ ರಾಥಿಗೆ ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸಿ, 2 ಡಿಮೆರಿಟ್ ಪಾಯಿಂಟ್ ನೀಡಲಾಗಿತ್ತು.

ಇದೀಗ ಮೂರನೇ ಬಾರಿಗೆ ದಿಗ್ವೇಶ್ ರಾಥಿ ಐಪಿಎಲ್ನ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ದಿಗ್ವೇಶ್ ರಾಥಿಗೆ ಒಂದು ಪಂದ್ಯದ ನಿಷೇಧ ಹೇರಿದ್ದಾರೆ. ಇದರ ಜೊತೆಗೆ ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸಿ, 2 ಡಿಮೆರಿಟ್ ಪಾಯಿಂಟ್ ನೀಡಿದ್ದಾರೆ.

ಇನ್ನು ದಿಗ್ವೇಶ್ ರಾಥಿ ಜೊತೆ ಮೈದಾನದಲ್ಲೇ ಜಗಳಕ್ಕಿಳಿದಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಗಿದೆ. ಅತ್ತ ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಿರುವ ದಿಗ್ವೇಶ್ ರಾಥಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಿಂದ ಹೊರಬಿದ್ದಿದ್ದಾರೆ.
Published On - 11:06 am, Tue, 20 May 25
