
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ ಉಳಿದ ಪಂದ್ಯಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವೇಗಿ ಜೋಶ್ ಹೇಝಲ್ವುಡ್ (Josh Hazelwood) ಅಲಭ್ಯರಾಗುವ ಸಾಧ್ಯತೆಯಿದೆ. ಭುಜದ ನೋವಿನಿಂದ ಬಳಲುತ್ತಿದ್ದ ಹೇಝಲ್ವುಡ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಇದೀಗ ಅವರು ಮುಂಬರುವ ಪಂದ್ಯಗಳಲ್ಲೂ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ.

ಏಕೆಂದರೆ ಭಾರತ ಮತ್ತು ಪಾಕ್ ನಡುವಣ ಯುದ್ಧದ ಭೀತಿ ಹಿನ್ನಲೆಯಲ್ಲಿ ತವರಿಗೆ ಮರಳಿದ ವಿದೇಶಿ ಆಟಗಾರರಲ್ಲಿ ಜೋಶ್ ಹೇಝಲ್ವುಡ್ ಕೂಡ ಒಬ್ಬರು. ಈಗಾಗಲೇ ಆಸ್ಟ್ರೇಲಿಯಾ ತಲುಪಿರುವ ಹೇಝಲ್ವುಡ್ ಭುಜದ ನೋವಿನ ಕಾರಣ ವಾಪಾಸಾಗುವುದು ಡೌಟ್. ಒಂದು ವೇಳೆ ಆಸೀಸ್ ವೇಗಿ ಹಿಂತಿರುಗದಿದ್ದರೆ ಆರ್ಸಿಬಿ ತಂಡಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

ಏಕೆಂದರೆ ಈ ಬಾರಿ ಆರ್ಸಿಬಿ ಪರ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ ಜೋಶ್ ಹೇಝಲ್ವುಡ್. 10 ಪಂದ್ಯಗಳಲ್ಲಿ 36.5 ಓವರ್ಗಳನ್ನು ಎಸೆದಿರುವ ಹೇಝಲ್ವುಡ್ 8.44 ರ ಸರಾಸರಿಯಲ್ಲಿ ಒಟ್ಟು 311 ರನ್ ನೀಡುವ ಮೂಲಕ 18 ವಿಕೆಟ್ಗಳನ್ನು ಕಬಳಿಸಿದ್ದಾರೆ. ವಿಶೇಷ ಎಂದರೆ ಜೋಶ್ ಹೇಝಲ್ವುಡ್ ಅವರನ್ನು ಹೊರತುಪಡಿಸಿ ಆರ್ಸಿಬಿ ತಂಡದ ಯಾವುದೇ ವೇಗಿ 10 ವಿಕೆಟ್ಗಳನ್ನು ಸಹ ಕಬಳಿಸಿಲ್ಲ.

ಇನ್ನು ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಅತ್ಯಧಿಕ ಡಾಟ್ ಬಾಲ್ ಎಸೆದ ಬೌಲರ್ ಕೂಡ ಜೋಶ್ ಹೇಝಲ್ವುಡ್. 36.5 ಓವರ್ಗಳಲ್ಲಿ ಒಟ್ಟು 103 ಡಾಟ್ ಬಾಲ್ಗಳನ್ನು ಎಸೆದಿದ್ದಾರೆ. ಹೇಝಲ್ವುಡ್ ಅವರನ್ನು ಹೊರತುಪಡಿಸಿ ಆರ್ಸಿಬಿ ತಂಡದ ಯಾವುದೇ ಬೌಲರ್ ಈ ಬಾರಿ 100 ಡಾಟ್ ಬಾಲ್ ಎಸೆದಿಲ್ಲ.

ಅಂದರೆ ಆರ್ಸಿಬಿ ತಂಡದ ಬೌಲಿಂಗ್ ಶಕ್ತಿ ಜೋಶ್ ಹೇಝಲ್ವುಡ್. ಇದೀಗ ಆರ್ಸಿಬಿ ತಂಡವು ನಿರ್ಣಾಯಕ ಹಂತಕ್ಕೆ ತಲುಪಿದೆ. ಮುಂದಿನ ಮೂರು ಮ್ಯಾಚ್ಗಳ ಮೂಲಕ ರಾಯಲ್ ಪಡೆಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವಿದೆ. ಇದಾದ ಬಳಿಕ ಪ್ಲೇಆಫ್ ಆಡಬೇಕಿದೆ. ಇದೀಗ ನಿರ್ಣಾಯಕ ಪಂದ್ಯಗಳ ವೇಳೆ ಜೋಶ್ ಹೇಝಲ್ವುಡ್ ಕೈಕೊಟ್ಟರೆ ಆರ್ಸಿಬಿ ತಂಡಕ್ಕೆ ಹಿನ್ನಡೆಯಾಗುವುದರಲ್ಲಿ ಡೌಟೇ ಇಲ್ಲ.