IPL 2025: RCB ಉಳಿಸಿಕೊಳ್ಳುವ ಆಟಗಾರರನ್ನು ಹೆಸರಿಸಿದ ಆಕಾಶ್ ಚೋಪ್ರಾ
IPL 2025: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ರೈಟ್ ಟು ಮ್ಯಾಚ್ (ಆರ್ಟಿಎಂ) ಆಯ್ಕೆ ನೀಡಲಾಗಿದೆ. ಅಂದರೆ ಒಬ್ಬ ಆಟಗಾರನನ್ನು ಆರ್ಟಿಎಂ ಆಪ್ಶನ್ನಲ್ಲಿ ಆಯ್ಕೆ ಮಾಡಿ, ಆ ಬಳಿಕ ಹರಾಜಿಗೆ ಬಿಡುಗಡೆ ಮಾಡುವುದು. ಹರಾಜಿನಲ್ಲಿ ಬೇರೆ ತಂಡ ಬಿಡ್ ಮಾಡಿದ್ರೆ, ಆ ಮೊತ್ತವನ್ನು ಬಿಡುಗಡೆ ಮಾಡಿದ ಫ್ರಾಂಚೈಸಿಯೇ ನೀಡಿ ಮತ್ತೆ ತಂಡಕ್ಕೆ ಆಯ್ಕೆ ಮಾಡಿಕೊಳ್ಳುವ ಆಯ್ಕೆ. ಆಟಗಾರರನ್ನು ರಿಟೈನ್ ಮಾಡದೇ ಈ ಆಯ್ಕೆಯ ಮೂಲಕ ಗರಿಷ್ಠ 6 ಆಟಗಾರರ ಮೇಲೆ ಆರ್ಟಿಎಂ ಬಳಸಿಕೊಳ್ಳಬಹುದು.
Updated on: Oct 06, 2024 | 11:53 AM

IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿ 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು. ಹೀಗೆ ರಿಟೈನ್ ಮಾಡಿಕೊಳ್ಳಲಾಗುವ ಆಟಗಾರರಿಗೆ ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಅದರಂತೆ ಆರು ಆಟಗಾರರನ್ನು ಉಳಿಸಿಕೊಳ್ಳಲು ಮುಂದಾದರೆ ಬರೋಬ್ಬರಿ 79 ಕೋಟಿ ರೂ. ಅನ್ನು ವ್ಯಯಿಸಬೇಕು.

ಇಲ್ಲಿ ಮೊದಲ ಆಟಗಾರನಿಗೆ 18 ಕೋಟಿ, ಎರಡನೇ ಆಟಗಾರನಿಗೆ 14 ಕೋಟಿ, ಮೂರನೇ ಆಟಗಾರನಿಗೆ 11 ಕೋಟಿ, ನಾಲ್ಕನೇ ಆಟಗಾರನಿಗೆ 18 ಕೋಟಿ, ಐದನೇ ಆಟಗಾರನಿಗೆ 14 ಕೋಟಿ ರೂ. ಹಾಗೂ ಆರನೇ ಆಟಗಾರನಿಗೆ 4 ಕೋಟಿ ಕೋಟಿ ನೀಡಬೇಕಾಗುತ್ತದೆ. ಹೀಗಾಗಿಯೇ ಈ ಬಾರಿ ಯಾವ ತಂಡ ಯಾರನ್ನು ಉಳಿಸಿಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ.

ಈ ಕುತೂಹಲದ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಉಳಿಸಿಕೊಳ್ಳಲಿರುವ 6 ಆಟಗಾರರನ್ನು ಹೆಸರಿಸಿದ್ದಾರೆ ಭಾರತ ತಂಡದ ಮಾಜಿ ಆಟಗಾರ ಆಕಾಶ್ ಚೋಪ್ರಾ. ಟೀಮ್ ಇಂಡಿಯಾದ ಮಾಜಿ ಆಟಗಾರನ ಪ್ರಕಾರ ಆರ್ಸಿಬಿ 4+2 ಸೂತ್ರದೊಂದಿಗೆ ಒಟ್ಟು 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲಿದೆ.

ಅದರಂತೆ ಆರ್ಸಿಬಿ ತಂಡದ ಮೊದಲ ರಿಟೈನ್ ವಿರಾಟ್ ಕೊಹ್ಲಿ ಆಗಲಿದ್ದಾರೆ. ಕೊಹ್ಲಿಯನ್ನು ಫಸ್ಟ್ ರಿಟೆನ್ಷನ್ ಆಯ್ಕೆಯಲ್ಲಿ RCB ತಂಡದಲ್ಲೇ ಉಳಿಸಿಕೊಳ್ಳುವುದು ಖಚಿತ ಎಂದಿದ್ದಾರೆ ಆಕಾಶ್ ಚೋಪ್ರಾ.

ಇನ್ನು ಆರ್ಸಿಬಿ ತಂಡದ 2ನೇ ಆಯ್ಕೆ ಕ್ಯಾಮರೋನ್ ಗ್ರೀನ್. ಆಸ್ಟ್ರೇಲಿಯಾದ ಆಲ್ರೌಂಡರ್ ಗ್ರೀನ್ ಅವರನ್ನು ಆರ್ಸಿಬಿ ಬಿಡುಗಡೆ ಮಾಡುವ ಸಾಧ್ಯತೆಯಿಲ್ಲ. ಹೀಗಾಗಿ ಅವರನ್ನು 2ನೇ ರಿಟೆನ್ಷನ್ ಆಯ್ಕೆಯಲ್ಲಿ ತಂಡದಲ್ಲೇ ಉಳಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.

ಮೂರನೇ ರಿಟೆನ್ಷನ್ನಲ್ಲಿ ಯುವ ದಾಂಡಿಗ ರಜತ್ ಪಾಟಿದಾರ್ ಆಯ್ಕೆಯಾಗಲಿದ್ದಾರೆ. ಆರ್ಸಿಬಿ ಪರ ಅತ್ಯುತ್ತಮ ಪ್ರದರ್ಶನ ನೀಡಿರುವ ಕಾರಣ ಪಾಟಿದಾರ್ ಅವರನ್ನು ಬೆಂಗಳೂರು ಫ್ರಾಂಚೈಸಿ ಕೈ ಬಿಡುವ ಸಾಧ್ಯತೆಯಿಲ್ಲ ಎಂದು ಚೋಪ್ರಾ ಹೇಳಿದ್ದಾರೆ.

ಆರ್ಸಿಬಿ ಫ್ರಾಂಚೈಸಿಯು ನಾಲ್ಕನೇ ಆಯ್ಕೆಯಲ್ಲಿ ವೇಗದ ಬೌಲರ್ ಯಶ್ ದಯಾಳ್ ಅವರನ್ನು ಉಳಿಸಿಕೊಳ್ಳಲಿದೆ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ. ದಯಾಳ್ ಅನ್ಕ್ಯಾಪ್ಡ್ ಆಟಗಾರನಾಗಿ ಕಾರಣ ಆರ್ಸಿಬಿ ಅವರನ್ನು ಅನ್ಕ್ಯಾಪ್ಡ್ ಪಟ್ಟಿಯಲ್ಲಿ ರಿಟೈನ್ ಮಾಡಿಕೊಳ್ಳಲಿದೆ.

ಇನ್ನು ಆರ್ಸಿಬಿ ಫ್ರಾಂಚೈಸಿಯು ಮೊಹಮ್ಮದ್ ಸಿರಾಜ್ ಹಾಗೂ ವಿಲ್ ಜಾಕ್ಸ್ ಮೇಲೆ ಆರ್ಟಿಎಂ ಆಯ್ಕೆಯನ್ನು ಬಳಸಲಿದೆ. ಇವರಿಬ್ಬರನ್ನು ಆರ್ಟಿಎಂ ಆಯ್ಕೆಯಡಿಯಲ್ಲಿ ಹರಾಜಿಗೆ ಬಿಟ್ಟು, ಆ ಬಳಿಕ ಮತ್ತೆ ಖರೀದಿಸುವ ಸಾಧ್ಯತೆಯಿದೆ. ಈ ಮೂಲಕ 4+2 ಸೂತ್ರದ ಅಡಿಯಲ್ಲಿ ಆರ್ಸಿಬಿ ಈ 6 ಆಟಗಾರರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.



















