ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರ ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಹೊರಬಂದಿರುವ ರಾಹುಲ್ ಮೆಗಾ ಆಕ್ಷನ್ನಲ್ಲಿ ಅದೃಷ್ಟ ಪರೀಕ್ಷಿಸಲಿದ್ದಾರೆ. ಈ ಅದೃಷ್ಟ ಪರೀಕ್ಷೆಯೊಂದಿಗೆ ಕನ್ನಡಿಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರಲಿದ್ದಾರಾ ಎಂಬುದೇ ಪ್ರಶ್ನೆ.
ಏಕೆಂದರೆ ಕೆಎಲ್ ರಾಹುಲ್ ಈ ಹಿಂದಿನಿಂದಲೂ ತವರು ತಂಡದ ಪರ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಇದೀಗ ಮತ್ತೊಮ್ಮೆ ಆರ್ಸಿಬಿ ಜೊತೆಗಿನ ನಂಟನ್ನು ತಿಳಿಸಿರುವ ರಾಹುಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಖಾಸಗಿ ಚಾನೆಲ್ವೊಂದರ ಸಂದರ್ಶನದಲ್ಲಿ ಮಾತನಾಡಿದ ಕೆಎಲ್ ರಾಹುಲ್, 2016 ರಲ್ಲಿ ಆರ್ಸಿಬಿ ತಂಡದಲ್ಲಿದ್ದಾಗ, ನಾನು ಸಾಕಷ್ಟು ಎಂಜಾಯ್ ಮಾಡಿದ್ದೆ. ಅದರಲ್ಲೂ ಬೆಂಗಳೂರು ನನ್ನ ತವರೂರು. ಅಭಿಮಾನಿಗಳು ನನ್ನನ್ನು ಕನ್ನಡದ ಹುಡುಗ ಎಂದೇ ಕರೀತಾರೆ. ಈ ಎಲ್ಲಾ ಕಾರಣದಿಂದಾಗಿ ನನಗೆ ಬೆಂಗಳೂರು ಪರ ಕಣಕ್ಕಿಳಿಯುವುದು ವಿಶೇಷವಾಗಿತ್ತು ಎಂದು ತಿಳಿಸಿದ್ದಾರೆ.
ಈ ಮೂಲಕ ಕೆಎಲ್ ರಾಹುಲ್ ಮತ್ತೆ ಆರ್ಸಿಬಿ ಪರ ಕಣಕ್ಕಿಳಿಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಈ ಇಂಗಿತವನ್ನು ಪೂರೈಸಲು ಈ ಬಾರಿಯ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕನ್ನಡಿಗನ ಖರೀದಿಗೆ ಬಿಡ್ ಮಾಡುವುದು ಅತ್ಯುತ್ತಮ ಆಯ್ಕೆ. ಏಕೆಂದರೆ ನಾಯಕ ಫಾಫ್ ಡುಪ್ಲೆಸಿಸ್ ಆರ್ಸಿಬಿ ತಂಡದಿಂದ ಹೊರಬಿದ್ದಿದ್ದು, ಹಾಗೆಯೇ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ ಆಯ್ಕೆಯಿಂದ ಆರ್ಸಿಬಿ ಇಬ್ಬರ ಸ್ಥಾನವನ್ನು ತುಂಬಬಹುದು.
ಅಂದಹಾಗೆ ಕೆಎಲ್ ರಾಹುಲ್ ಆರ್ಸಿಬಿ ಪರ ಒಟ್ಟು 19 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 14 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು 4 ಅರ್ಧಶತಕಗಳೊಂದಿಗೆ ಒಟ್ಟು 417 ರನ್ ಕಲೆಹಾಕಿದ್ದಾರೆ. ಇದೀಗ ರಾಹುಲ್ ಮತ್ತೆ ತವರು ತಂಡದ ಪರ ಕಣಕ್ಕಿಳಿಯುವ ಇರಾದೆಯಲ್ಲಿದ್ದು, ಈ ಆಸೆಯು ಈ ಬಾರಿಯ ಮೆಗಾ ಹರಾಜಿನ ಮೂಲಕ ಈಡೇರಲಿದೆಯಾ ಕಾದು ನೋಡಬೇಕಿದೆ.
Published On - 8:10 am, Wed, 13 November 24