- Kannada News Photo gallery Cricket photos IPL 2025: Rishabh Pant breaks silence on not being retained by Delhi Capitals
IPL 2025: ಬರೀ ದುಡ್ಡಿಗಾಗಿ ಅಲ್ಲ… ಮೌನ ಮುರಿದ ರಿಷಭ್ ಪಂತ್
IPL 2025 Mega Auction: ಈ ಬಾರಿಯ ಐಪಿಎಲ್ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ನಡೆಯಲಿದೆ. ಸೌದಿ ಅರೇಬಿಯಾದ ಜಿದ್ಧಾದಲ್ಲಿ ಜರುಗಲಿರುವ ಈ ಹರಾಜು ಪ್ರಕ್ರಿಯೆಯಲ್ಲಿ 574 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಇವರಲ್ಲಿ ರಿಷಭ್ ಪಂತ್ ಸೇರಿದಂತೆ 12 ಆಟಗಾರರು ಮೊದಲ ಸುತ್ತಿನಲ್ಲಿ ಹರಾಜಾಗಲಿದ್ದಾರೆ.
Updated on: Nov 20, 2024 | 9:57 AM

ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಈ ಬಾರಿಯ ಐಪಿಎಲ್ (IPL 2025) ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ಪಂತ್ ಅವರು ಈ ಬಾರಿ ರಿಟೈನ್ ಆಗಿಲ್ಲ. ಇದರ ಬೆನ್ನಲ್ಲೇ ರಿಷಭ್ ಡೆಲ್ಲಿ ತಂಡ ತೊರೆಯಲು ಮುಖ್ಯ ಕಾರಣ ಬೃಹತ್ ಮೊತ್ತದ ಡಿಮ್ಯಾಂಡ್ ಎನ್ನಲಾಗಿತ್ತು.

ಕಳೆದ ಸೀಸನ್ನಲ್ಲಿ 16 ಕೋಟಿ ರೂ. ಪಡೆದಿದ್ದ ರಿಷಭ್ ಪಂತ್ ಈ ಬಾರಿ ಹೆಚ್ಚಿನ ಸಂಭಾವನೆಗಾಗಿ ಬೇಡಿಕೆಯಿಟ್ಟಿದ್ದಾರೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಬೃಹತ್ ಮೊತ್ತ ನೀಡಲು ಹಿಂದೇಟು ಹಾಕಿದ್ದರಿಂದ ಅವರು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

ಅಲ್ಲದೆ ಇತ್ತೀಚೆಗೆ ಸುನಿಲ್ ಗವಾಸ್ಕರ್ ಖಾಸಗಿ ಚಾನೆಲ್ವೊಂದರಲ್ಲಿ, ರಿಷಭ್ ಪಂತ್ ಹೆಚ್ಚಿನ ಹಣಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಈ ಆರೋಪದ ಬೆನ್ನಲ್ಲೇ ಇದೀಗ ರಿಷಭ್ ಪಂತ್ ಮೌನ ಮುರಿದಿದ್ದಾರೆ.

ತಮ್ಮ ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ಸ್ಪಷ್ಟನೆ ನೀಡಿರುವ ಪಂತ್, ಹಣದ ವಿಚಾರಕ್ಕೆ ನಾನು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸದ್ಯ ಹರಿದಾಡುತ್ತಿರುವ ಸುದ್ದಿಗಳಲ್ಲಿ ಸತ್ಯಾಂಶವಿಲ್ಲ ಎಂದು ಪಂತ್ ಹೇಳಿದ್ದಾರೆ.

ರಿಷಭ್ ಪಂತ್ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಐಪಿಎಲ್ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಮೊದಲ ಸೆಟ್ನಲ್ಲೇ ಸ್ಥಾನ ಪಡೆದಿರುವ ಪಂತ್ ಖರೀದಿಗಾಗಿ ಆರಂಭದಲ್ಲೇ ಭರ್ಜರಿ ಪೈಪೋಟಿ ಕಂಡು ಬರಲಿದೆ. ಈ ಪೈಪೋಟಿಯೊಂದಿಗೆ ರಿಷಭ್ ಪಂತ್ ಯಾವ ತಂಡದ ಪಾಲಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.



















