- Kannada News Photo gallery Cricket photos IPL 2025: USA pacer Saurabh Netravalkar registers for IPL Mega Auction
IPL 2025: ಅತೀ ಕಡಿಮೆ ಮೂಲ ಬೆಲೆ: ಐಪಿಎಲ್ಗೆ ಆಯ್ಕೆಯಾದರೆ ಹೊಸ ಇತಿಹಾಸ
IPL 2025: ಮುಂಬೈ ಮೂಲದ ಸೌರಭ್ ನೇತ್ರವಾಲ್ಕರ್ ಈ ಹಿಂದೆ ಭಾರತದ ಪರ ಅಂಡರ್-19 ವಿಶ್ವಕಪ್ ಆಡಿದ್ದರು. ಇದಾದ ಬಳಿಕ ಯುಎಸ್ಎಗೆ ವಲಸೆ ಹೋಗಿದ್ದ ಅವರು ಇದೀಗ ಅಲ್ಲಿನ ರಾಷ್ಟ್ರೀಯ ತಂಡದ ಖಾಯಂ ಸದಸ್ಯರಾಗಿದ್ದಾರೆ. ಅದರಂತೆ ವಿದೇಶಿ ಆಟಗಾರರ ಪಟ್ಟಿಯಲ್ಲಿ ಸೌರಭ್ ನೇತ್ರವಾಲ್ಕರ್ ಐಪಿಎಲ್ ಹರಾಜಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ.
Updated on: Nov 10, 2024 | 8:35 AM

ಸೌರಭ್ ನೇತ್ರವಾಲ್ಕರ್... ಈ ಹೆಸರು ಭಾರತೀಯರಿಗೆ ಚಿರಪರಿಚಿತ. ಏಕೆಂದರೆ ಕಳೆದ ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಕೆಟ್ ಕಬಳಿಸುವ ಮೂಲಕ ಭಾರತೀಯ ಮೂಲದ ಯುಎಸ್ಎ ವೇಗಿ ಎಲ್ಲರ ಗಮನ ಸೆಳೆದಿದ್ದರು. ಅಲ್ಲದೆ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನದೊಂದಿಗೆ ಮಿಂಚಿದ್ದರು. ಇದೀಗ ಇದೇ ಸೌರಭ್ ನೇತ್ರವಾಲ್ಕರ್ ಐಪಿಎಲ್ಗೆ ಎಂಟ್ರಿ ಕೊಡಲು ತುದಿಗಾಲಲ್ಲಿ ನಿಂತಿದ್ದಾರೆ.

ಇದರ ಮೊದಲ ಹೆಜ್ಜೆಯಾಗಿ ಐಪಿಎಲ್ 2025 ರ ಮೆಗಾ ಹರಾಜಿಗಾಗಿ ಸೌರಭ್ ನೇತ್ರವಾಲ್ಕರ್ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅದು ಕೂಡ ಕೇವಲ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಎಂಬುದು ವಿಶೇಷ. ಅಂದರೆ ಚೊಚ್ಚಲ ಐಪಿಎಲ್ ಅವಕಾಶವನ್ನು ಎದುರು ನೋಡುತ್ತಿರುವ ಸೌರಭ್ ಅತೀ ಕಡಿಮೆ ಬೇಸ್ ಪ್ರೈಸ್ನೊಂದಿಗೆ ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದಾರೆ.

ಈಗಾಗಲೇ ಯುಎಸ್ಎ ಪರ 36 ಟಿ20 ಪಂದ್ಯಗಳನ್ನಾಡಿರುವ ಸೌರಭ್ ನೇತ್ರವಾಲ್ಕರ್ 36 ವಿಕೆಟ್ ಕಬಳಿಸಿದ್ದಾರೆ. ಅದರಲ್ಲೂ ಎಡಗೈ ವೇಗದ ಬೌಲಿಂಗ್ ಮೂಲಕ ಬ್ಯಾಟರ್ಗಳನ್ನು ಇಕ್ಕಟಿಗೆ ಸಿಲುಕಿಸುವಲ್ಲಿ ನಿಸ್ಸೀಮರಾಗಿ ಗುರುತಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಅವರು ಕಳೆದ 36 ಪಂದ್ಯಗಳಲ್ಲಿ ಕೇವಲ 6.71 ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟಿರುವುದು.

ಇದೀಗ ಐಪಿಎಲ್ ಅಂಗಳಕ್ಕೆ ಕಾಲಿಡಲು ಸಜ್ಜಾಗಿರುವ ಸೌರಭ್ ನೇತ್ರವಾಲ್ಕರ್ ಅವರ ಮೇಲೆ ಒಂದಷ್ಟು ಫ್ರಾಂಚೈಸಿಗಳು ಕಣ್ಣಿಟ್ಟಿರುವುದು ಸುಳ್ಳಲ್ಲ. ಅದರಲ್ಲೂ ಅತೀ ಕಡಿಮೆ ಮೂಲ ಬೆಲೆ ಘೋಷಿಸಿರುವ ಕಾರಣ ಅವರನ್ನು ಯಾವುದಾದರೂ ಫ್ರಾಂಚೈಸಿ ಬ್ಯಾಕ್ ಅಪ್ ಬೌಲರ್ ಆಗಿ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.

ಒಂದು ವೇಳೆ ಸೌರಭ್ ನೇತ್ರವಾಲ್ಕರ್ ಐಪಿಎಲ್ ಮೆಗಾ ಹರಾಜಿನ ಮೂಲಕ ಆಯ್ಕೆಯಾದರೆ ಹೊಸ ಇತಿಹಾಸ ಕೂಡ ನಿರ್ಮಾಣವಾಗಲಿದೆ. ಏಕೆಂದರೆ ಐಪಿಎಲ್ ಇತಿಹಾಸದಲ್ಲಿ ಯುಎಸ್ಎ ತಂಡದ ಯಾವುದೇ ಆಟಗಾರ ಹರಾಜಿನ ಮೂಲಕ ಆಯ್ಕೆಯಾಗಿಲ್ಲ. ಹೀಗಾಗಿ ನವೆಂಬರ್ 24 ಮತ್ತು 25 ರಂದು ನಡೆಯಲಿರುವ ಮೆಗಾ ಹರಾಜಿನ ಮೂಲಕ ಸೌರಭ್ ನೇತ್ರವಾಲ್ಕರ್ ಹೆಸರು ಇತಿಹಾಸ ಪುಟಕ್ಕೆ ಸೇರ್ಪಡೆಯಾಗಲಿದೆಯಾ ಕಾದು ನೋಡಬೇಕಿದೆ.




