RCB ವಿರುದ್ಧದ ಪಂದ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ ಅಲಭ್ಯ
IPL 2025 RCB vs PBKS: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಈ ನಿರ್ಣಾಯಕ ಪಂದ್ಯದಿಂದ ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಆಲ್ರೌಂಡರ್ ಹೊರಗುಳಿದಿದ್ದಾರೆ.
Updated on: May 29, 2025 | 8:23 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ಲೇಆಫ್ ಪಂದ್ಯಗಳಿಗೆ ಇಂದು ಚಾಲನೆ ದೊರೆಯಲಿದೆ. ಚಂಡೀಗಢ್ನಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಲಿದೆ. ಈ ನಿರ್ಣಾಯಕ ಪಂದ್ಯಕ್ಕೆ ಕಿಂಗ್ಸ್ ಪಡೆಯ ಪ್ರಮುಖ ಆಟಗಾರ ಅಲಭ್ಯರಾಗಿದ್ದಾರೆ.

ಹೌದು, ಪಂಜಾಬ್ ಕಿಂಗ್ಸ್ ತಂಡದ ಆಲ್ರೌಂಡರ್ ಮಾರ್ಕೊ ಯಾನ್ಸೆನ್ ಪ್ಲೇಆಫ್ ಪಂದ್ಯಗಳಲ್ಲಿ ಕಣಕ್ಕಿಳಿಯುವುದಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಸಿದ್ಧತೆಗಾಗಿ ಮಾರ್ಕೊ ಯಾನ್ಸೆನ್ ಸೌತ್ ಆಫ್ರಿಕಾ ತಂಡವನ್ನು ಕೂಡಿಕೊಂಡಿದ್ದಾರೆ. ಹೀಗಾಗಿ ಇಂದು ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಯಾನ್ಸೆನ್ ಕಾಣಿಸಿಕೊಳ್ಳುವುದಿಲ್ಲ.

ಈ ಬಾರಿಯ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ 14 ಪಂದ್ಯಗಳನ್ನಾಡಿರುವ ಯಾನ್ಸೆನ್ ಒಟ್ಟು 283 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 434 ರನ್ ನೀಡುವ ಮೂಲಕ ಒಟ್ಟು 16 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಬ್ಯಾಟಿಂಗ್ನಲ್ಲೂ 75 ರನ್ಗಳ ಕೊಡುಗೆ ನೀಡಿದ್ದಾರೆ.

ಇದೀಗ ಪ್ಲೇಆಫ್ ಪಂದ್ಯಗಳಿಂದ ಮಾರ್ಕೊ ಯಾನ್ಸೆನ್ ಹೊರಗುಳಿಯುತ್ತಿರುವುದು ಪಂಜಾಬ್ ಕಿಂಗ್ಸ್ ಪಾಲಿಗೆ ಹಿನ್ನಡೆ ಎನ್ನಬಹುದು. ಇದಾಗ್ಯೂ ಪಂಜಾಬ್ ಪಡೆಯಲ್ಲಿ ಅಫ್ಘಾನಿಸ್ತಾನದ ಆಲ್ರೌಂಡರ್ ಅಝ್ಮತುಲ್ಲಾ ಒವರ್ಝಾಹಿ ಇದ್ದು, ಇಂದಿನ ಪಂದ್ಯದಲ್ಲಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

ಇನ್ನು ಇಂದಿನ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್ಗೆ ಪ್ರವೇಶಿಸಿದರೆ, ಸೋತ ತಂಡ ದ್ವಿತೀಯ ಕ್ವಾಲಿಫೈಯರ್ ಆಡಲಿದೆ. ಅಲ್ಲದೆ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡ ಹಾಗೂ ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡ ದ್ವಿತೀಯ ಕ್ವಾಲಿಫೈಯರ್ನಲ್ಲಿ ಮುಖಾಮುಖಿಯಾಗಲಿದೆ. ಹೀಗಾಗಿ ಇಂದಿನ ಮ್ಯಾಚ್ನಲ್ಲಿ ಸೋತ ತಂಡಕ್ಕೆ ಫೈನಲ್ಗೆ ಪ್ರವೇಶಿಸಲು ಮತ್ತೊಂದು ಅವಕಾಶ ದೊರೆಯಲಿದೆ.
