
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 57 ಪಂದ್ಯಗಳು ಮುಗಿದ್ದು, ಇನ್ನುಳಿದಿರುವುದು ಕೇವಲ 13 ಮ್ಯಾಚ್ಗಳು ಮಾತ್ರ. ಈ ಹದಿಮೂರು ಪಂದ್ಯಗಳ ಮೂಲಕ ಈ ಬಾರಿ ಪ್ಲೇಆಫ್ ಆಡಲಿರುವ 4 ತಂಡಗಳಾವುವು ಎಂಬುದು ನಿರ್ಧಾರವಾಗಲಿದೆ. ಅದಕ್ಕೂ ಮುನ್ನ ಮುಂದಿನ ಹಂತಕ್ಕೇರಲಿರುವ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ ಸೌತ್ ಆಫ್ರಿಕಾದ ಮಾಜಿ ಆಟಗಾರ ಮಾರ್ಕ್ ಬೌಚರ್.

ಮುಂಬೈ ಇಂಡಿಯನ್ಸ್ ತಂಡದ ಮಾಜಿ ಕೋಚ್ ಆಗಿರುವ ಮಾರ್ಕ್ ಬೌಚರ್ ಪ್ರಕಾರ, ಈ ಬಾರಿಯ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡವು ಪ್ಲೇಆಫ್ ಹಂತಕ್ಕೇರಲಿದೆ. ಈಗಾಗಲೇ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಶುಭ್ಮನ್ ಗಿಲ್ ಪಡೆಯು ಮುಂದಿನ ಮೂರು ಮ್ಯಾಚ್ಗಳ ಮೂಲಕ ಪ್ಲೇಆಫ್ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ ಎಂದಿದ್ದಾರೆ.

ಹಾಗೆಯೇ ಅಕ್ಷರ್ ಪಟೇಲ್ ಮುಂದಾಳತ್ವದಲ್ಲಿ ಕಣಕ್ಕಿಳಿಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇನ್ನೂ 3 ಪಂದ್ಯಗಳಿವೆ. ಈ ಮ್ಯಾಚ್ಗಳಲ್ಲಿ ಗೆಲ್ಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಪ್ಲೇಆಫ್ ಹಂತಕ್ಕೇರಲಿದೆ ಎಂದು ಮಾರ್ಕ್ ಬೌಚರ್ ಹೇಳಿದ್ದಾರೆ.

ಪ್ಲೇಆಫ್ ಹಂತಕ್ಕೇರಲಿರುವ ಮೂರನೇ ತಂಡವಾಗಿ ಮಾರ್ಕ್ ಬೌಚರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹೆಸರಿಸಿದ್ದಾರೆ. ಆರ್ಸಿಬಿ ತಂಡವು ಈ ಬಾರಿಯ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಹೀಗಾಗಿ ರಾಯಲ್ ಪಡೆಯನ್ನು ಸಹ ಪ್ಲೇಆಫ್ ಸುತ್ತಿನಲ್ಲಿ ಎದುರು ನೋಡಬಹುದು ಎಂದಿದ್ದಾರೆ.

ಇನ್ನು ಮುಂಬೈ ಇಂಡಿಯನ್ಸ್ ತಂಡ ಕೂಡ ಪ್ಲೇಆಫ್ ಸುತ್ತಿಗೆ ಪ್ರವೇಶಿಸುವುದು ಖಚಿತ ಎಂದಿದ್ದಾರೆ. ಹಾರ್ದಿಕ್ ಪಾಂಡ್ಯ ಮುಂದಾಳತ್ವದಲ್ಲಿ ಮುಂಬೈ ಇಂಡಿಯನ್ಸ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಮುಂಬೈ ಪಡೆಯು ಕೂಡ ಉಳಿದ ಪಂದ್ಯಗಳ ಮೂಲಕ ಪ್ಲೇಆಫ್ಗೇರಲಿದೆ ಎಂದು ಮಾರ್ಕ್ ಬೌಚರ್ ಭವಿಷ್ಯ ನುಡಿದಿದ್ದಾರೆ.