IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ಮುಂಬೈ ಇಂಡಿಯನ್ಸ್ (MI) ತಂಡ ಆಡಿದ 4 ಪಂದ್ಯಗಳಲ್ಲಿ ಮೂರಲ್ಲಿ ಸೋಲನುಭವಿಸಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಗೆದ್ದು ಬೀಗಿದ್ದ ಮುಂಬೈ ಪಡೆ ಈ ಬಾರಿ ಕೂಡ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಾಂಘಿಕ ಪ್ರದರ್ಶನದಿಂದಾಗಿ ಸೋಲೊಪ್ಪಿಕೊಳ್ಳಬೇಕಾಯಿತು.
ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಈ ಪರಾಜಯದ ಸಂಪೂರ್ಣ ಹೊಣೆಯನ್ನು ಹೊತ್ತುಕೊಳ್ಳುವುದಾಗಿ ತಿಳಿಸಿದರು. ಅಲ್ಲದೆ ತಿಲಕ್ ವರ್ಮಾ ಅವರನ್ನು ರಿಟೈರ್ಡ್ ಔಟ್ ಮಾಡಿರುವುದನ್ನು ಸಮರ್ಥಿಸಿಕೊಂಡರು. ಪೋಸ್ಟ್ ಮ್ಯಾಚ್ ಸಂದರ್ಶನದಲ್ಲಿ ನಗುಮುಖದೊಂದಿಗೆ ಕಾಣಿಸಿಕೊಂಡ ಪಾಂಡ್ಯ ಆ ಬಳಿಕ ಭಾವುಕರಾದರು.
ಅಂದರೆ ಸಂದರ್ಶನದ ವೇಳೆ ತನ್ನ ಭಾವನೆಗಳನ್ನು ಅದುಮಿಟ್ಟುಕೊಂಡು ಪಾಂಡ್ಯ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಅಲ್ಲದೆ ಸಂದರ್ಶನ ಮುಗಿಯುತ್ತಿದ್ದಂತೆ ದೂರ ಸರಿದು ನಿಂತ ಹಾರ್ದಿಕ್ ಪಾಂಡ್ಯ ತನ್ನ ಮುಖ ಕೆಳಗೆ ಮಾಡಿ ತಮ್ಮ ಕಣ್ಣೀರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದು ಕಂಡು ಬಂತು. ಈ ವೇಳೆ ತೆಗೆದ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮುಂಬೈ ಇಂಡಿಯನ್ಸ್ ತಂಡವನ್ನು ಈವರೆಗೆ 17 ಪಂದ್ಯಗಳಲ್ಲಿ ಮುನ್ನಡೆಸಿರುವ ಹಾರ್ದಿಕ್ ಪಾಂಡ್ಯ ಗೆಲುವಿನ ರುಚಿ ನೋಡಿದ್ದು ಕೇವಲ 5 ಪಂದ್ಯಗಳಲ್ಲಿ ಮಾತ್ರ. ಇನ್ನುಳಿದ 12 ಮ್ಯಾಚ್ಗಳಲ್ಲೂ ಮುಂಬೈ ಪಡೆ ಸೋಲನುಭವಿಸಿದೆ. ಈ ಸೋಲುಗಳಿಂದಲೇ ಇದೀಗ ಹಾರ್ದಿಕ್ ಪಾಂಡ್ಯ ಹತಾಶರಾಗಿದ್ದಾರೆ.
ಸದ್ಯ 4 ಪಂದ್ಯಗಳನ್ನು ಮುಗಿಸಿರುವ ಮುಂಬೈ ಇಂಡಿಯನ್ಸ್ ಮುಂದೆ ಲೀಗ್ ಹಂತದಲ್ಲಿ ಇನ್ನೂ 10 ಪಂದ್ಯಗಳಿವೆ. ಅದರಲ್ಲೂ ಮುಂದಿನ ಪಂದ್ಯವನ್ನು ತವರು ಮೈದಾನ ವಾಂಖೆಡೆ ಸ್ಟೇಡಿಯಂನಲ್ಲಿ ಆಡಲಿದ್ದು, ಏಪ್ರಿಲ್ 7 ರಂದು ನಡೆಯಲಿರುವ ಈ ಮ್ಯಾಚ್ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.