
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. 55 ಪಂದ್ಯಗಳ ಬಳಿಕ ಅಂಕ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡರೆ, ಪಂಜಾಬ್ ಕಿಂಗ್ಸ್ ತಂಡ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಕ್ರಮವಾಗಿ 3ನೇ ಮತ್ತು 4ನೇ ಸ್ಥಾನಗಳಲ್ಲಿ ಕಾಣಿಸಿಕೊಂಡಿದೆ.

ಇನ್ನುಳಿದ ಮೂರು ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕೂಡ ಪ್ಲೇಆಫ್ ರೇಸ್ನಲ್ಲಿದೆ. ಈ ಏಳು ತಂಡಗಳಲ್ಲಿ ಈ ಬಾರಿ ಪ್ಲೇಆಫ್ ಆಡಲಿರುವ 4 ತಂಡಗಳನ್ನು ಹೆಸರಿಸಿದ್ದಾರೆ ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ ಪಿಯೂಷ್ ಚಾವ್ಲಾ.

ಪಿಯೂಷ್ ಚಾವ್ಲಾ ಪ್ರಕಾರ, ಈ ಬಾರಿ ಗುಜರಾತ್ ಟೈಟಾನ್ಸ್ ತಂಡವು ಪ್ಲೇಆಫ್ಗೇರುವುದು ಖಚಿತ. ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಶುಭ್ಮನ್ ಗಿಲ್ ಪಡೆಯು ಉಳಿದೆಲ್ಲಾ ತಂಡಗಳನ್ನು ಹಿಂದಿಕ್ಕಿ ಪ್ಲೇಆಫ್ ಹಂತಕ್ಕೇರಲಿದೆ ಎಂದು ಚಾವ್ಲಾ ಅಭಿಪ್ರಾಯಪಟ್ಟಿದ್ದಾರೆ.

ಹಾಗೆಯೇ ಅಕ್ಷರ್ ಪಟೇಲ್ ಮುಂದಾಳತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಮುಂದಿನ ಹಂತಕ್ಕೇರಲಿದೆ ಎಂದಿದ್ದಾರೆ ಪಿಯೂಷ್ ಚಾವ್ಲಾ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಬಾರಿ ಉತ್ತಮ ಪ್ರದರ್ಶನ ನೀಡಿದ್ದು, ಹೀಗಾಗಿ ಲೀಗ್ ಹಂತದ ಮುಕ್ತಾಯದ ವೇಳೆಗೆ ಅವರು ಸಹ ಪ್ಲೇಆಫ್ ಹಂತಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿರುವ ಪಂಜಾಬ್ ಕಿಂಗ್ಸ್ ತಂಡದ ಪ್ರದರ್ಶನ ಅತ್ಯುತ್ತಮವಾಗಿದೆ. ಹೀಗಾಗಿ ಪಂಜಾಬ್ ಪಡೆಯನ್ನು ಸಹ ಈ ಬಾರಿ ಪ್ಲೇಆಫ್ ಸುತ್ತಿನಲ್ಲಿ ಎದುರು ನೋಡಬಹುದು ಎಂದು ಪಿಯೂಷ್ ಚಾವ್ಲಾ ಹೇಳಿದ್ದಾರೆ.

ಹಾಗೆಯೇ ನಾಲ್ಕನೇ ತಂಡವಾಗಿ ಮುಂಬೈ ಇಂಡಿಯನ್ಸ್ ಕೂಡ ಪ್ಲೇಆಫ್ ಸುತ್ತಿನಲ್ಲಿ ಕಾಣಿಸಿಕೊಳ್ಳಲಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಸತತ 6 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಹೀಗಾಗಿ ಉಳಿದ ಮ್ಯಾಚ್ನಲ್ಲೂ ಉತ್ತಮ ಪ್ರದರ್ಶನದೊಂದಿಗೆ ಮುಂಬೈ ಪಡೆ ಪ್ಲೇಆಫ್ ಹಂತಕ್ಕೇರಲಿದೆ ಎಂದು ಪಿಯೂಷ್ ಚಾವ್ಲಾ ಭವಿಷ್ಯ ನುಡಿದಿದ್ದಾರೆ.