
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 61 ಪಂದ್ಯಗಳು ಮುಗಿದಿದ್ದು, ಇನ್ನುಳಿದಿರುವುದು ಕೇವಲ 9 ಪಂದ್ಯಗಳು ಮಾತ್ರ. ಈ 9 ಮ್ಯಾಚ್ಗಳ ನಡುವೆ ಮುಂಬೈ ಇಂಡಿಯನ್ಸ್ (MI) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (DC) ನಡುವಣ ಪ್ಲೇಆಫ್ ಭವಿಷ್ಯ ನಿರ್ಧಾರವಾಗಲಿದೆ.

ಪ್ರಸ್ತುತ ಅಂಕ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು 14 ಅಂಕಗಳನ್ನು ಹೊಂದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 13 ಅಂಕಗಳನ್ನು ಹೊಂದಿದೆ. ಉಭಯ ತಂಡಗಳಿಗೂ ಇನ್ನೂ 2 ಪಂದ್ಯಗಳಿವೆ. ಈ ಎರಡು ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ ಮುಂಬೈ ಇಂಡಿಯನ್ಸ್ ಒಟ್ಟು 18 ಅಂಕಗಳನ್ನು ಪಡೆಯಬಹುದು. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದೆ 17 ಅಂಕಗಳೊಂದಿಗೆ ಪ್ಲೇಆಫ್ಗೆ ಎಂಟ್ರಿ ಕೊಡಬಹುದು.

ಆದರೆ ಇಲ್ಲಿ ಕುತೂಹಲಕಾರಿ ವಿಷಯ ಎಂದರೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮೇ 21 ರಂದು ಮುಖಾಮುಖಿಯಾಗಲಿರುವುದು. ಈ ಪಂದ್ಯವು ಎರಡೂ ತಂಡಗಳಿಗೂ ನಿರ್ಣಾಯಕ. ಅಂದರೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದರೆ ನೇರವಾಗಿ ಪ್ಲೇಆಫ್ಗೆ ಎಂಟ್ರಿ ಕೊಡಲಿದೆ.

ಒಂದು ವೇಳೆ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯಗಳಿಸಿದರೆ, ಕೊನೆಯ ಪಂದ್ಯದ ಮೂಲಕ ಮುಂಬೈ ಪಡೆಯನ್ನು ಹೊರಹಾಕಲು ಡಿಸಿ ತಂಡಕ್ಕೆ ಉತ್ತಮ ಅವಕಾಶ ದೊರೆಯಲಿದೆ. ಅಂದರೆ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದರೆ ಒಟ್ಟು 17 ಅಂಕಗಳೊಂದಿಗೆ ಪ್ಲೇಆಫ್ಗೆ ಪ್ರವೇಶಿಸಲಿದೆ.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಪಂಜಾಬ್ ಕಿಂಗ್ಸ್ ವಿರುದ್ಧ ಸೋತರೂ ಕೂಡ ಪ್ಲೇಆಫ್ಗೆ ಪ್ರವೇಶಿಸಬಹುದು. ಇಂತಹದೊಂದು ಅವಕಾಶ ಸಿಗಬೇಕಿದ್ದರೆ ಮುಂಬೈ ಇಂಡಿಯನ್ಸ್ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಗೆಲ್ಲಬೇಕು.

ಹಾಗೆಯೇ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತರೂ ಪ್ಲೇಆಫ್ ಅವಕಾಶವನ್ನು ಎದುರು ನೋಡಬಹುದು. ಅಂತಹದೊಂದು ಅವಕಾಶ ಸಿಗಬೇಕಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಸೋಲಬೇಕು. ಅತ್ತ ಮುಂಬೈ ಇಂಡಿಯನ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು 16 ಅಂಕಗಳೊಂದಿಗೆ ಮುಂದಿನ ಹಂತಕ್ಕೇರಬಹುದು.