IPL 2025: RCB ತಂಡದ ಮುಂದಿನ ಗುರಿ 17+4
IPL 2025 RCB: ಈ ಬಾರಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈವರೆಗೆ 12 ಪಂದ್ಯಗಳನ್ನಾಡಿದೆ. ಈ ವೇಳೆ ಆರ್ಸಿಬಿ ತಂಡವು 8 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಒಂದು ಪಂದ್ಯವು ಮಳೆಯ ಕಾರಣ ರದ್ದಾಗಿದ್ದರಿಂದ 1 ಅಂಕವನ್ನು ಪಡೆದುಕೊಂಡಿದೆ. ಈ ಮೂಲಕ ಒಟ್ಟು 17 ಅಂಕಗಳನ್ನು ಕಲೆಹಾಕಿರುವ ಆರ್ಸಿಬಿ ಮುಂದಿನ 2 ಪಂದ್ಯಗಳ ಮೂಲಕ 4 ಅಂಕಗಳನ್ನು ಪಡೆಯಬಹುದು.
Updated on: May 19, 2025 | 11:09 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪ್ಲೇಆಫ್ಗೆ ಪ್ರವೇಶಿಸಿದೆ. ಆಡಿರುವ 12 ಪಂದ್ಯಗಳಲ್ಲಿ 8 ಜಯ ಸಾಧಿಸಿರುವ ಆರ್ಸಿಬಿ ಸದ್ಯ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ರಾಯಲ್ ಪಡೆಗೆ ಇನ್ನೂ 2 ಪಂದ್ಯಗಳು ಬಾಕಿಯಿದ್ದು, ಈ ಮೂಲಕ ಆರ್ಸಿಬಿ ಹೆಚ್ಚುವರಿ 4 ಅಂಕಗಳನ್ನು ಕಲೆಹಾಕಬಹುದು.

ಅಂದರೆ 17 ಅಂಕಗಳನ್ನು ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂದಿನ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಅಂಕ ಪಟ್ಟಿಯಲ್ಲಿ ಮೊದಲ ಅಥವಾ ದ್ವಿತೀಯ ಸ್ಥಾನ ಅಲಂಕರಿಸಬಹುದು. ಈ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ಅವಕಾಶವನ್ನು ಎದುರು ನೋಡಬಹುದು.

ಇಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯವಾಡುವುದರಿಂದ ಸಿಗುವ ಲಾಭವೆಂದರೆ, ಸೋತರೂ ಮತ್ತೊಂದು ಪಂದ್ಯವಿರುವುದು. ಅಂದರೆ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಅಂಕ ಪಟ್ಟಿಯಲ್ಲಿ ಮೊದಲ ಮತ್ತು ಎರಡನೇ ಸ್ಥಾನಗಳಲ್ಲಿರುವ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ಗೆ ಎಂಟ್ರಿ ಕೊಡಲಿದೆ.

ಇನ್ನು ಮೊದಲ ಕ್ವಾಲಿಫೈಯರ್ನಲ್ಲಿ ಸೋಲುವ ತಂಡ ಟೂರ್ನಿಯಿಂದ ಹೊರಬೀಳುವುದಿಲ್ಲ. ಬದಲಾಗಿ ದ್ವಿತೀಯ ಕ್ವಾಲಿಫೈಯರ್ ಪಂದ್ಯವಾಡಲು ಅವಕಾಶ ಇರಲಿದೆ. ಅದರಂತೆ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದೊಡನೆ ದ್ವಿತೀಯ ಕ್ವಾಲಿಫೈಯರ್ನಲ್ಲಿ ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಫೈನಲ್ಗೇರಲು ಅವಕಾಶ ಸಿಗಲಿದೆ.

ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ತಂಡವು ಮುಂದಿನ 2 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಒಟ್ಟು 22 ಅಂಕಗಳನ್ನು ಪಡೆಯಲಿದೆ. ಈ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯವಾಡಲು ಅರ್ಹತೆ ಪಡೆಯಬಹುದು. ಇದೇ ವೇಳೆ ಆರ್ಸಿಬಿ ತಂಡವು ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಜಯಳಿಸಿದರೆ ಒಟ್ಟು 21 ಅಂಕಗಳನ್ನು ಪಡೆಯಲಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿ ಮೊದಲ ಕ್ವಾಲಿಫೈಯರ್ ಪಂದ್ಯವಾಡಬಹುದು.

ಆದರೆ ಅತ್ತ ಪಂಜಾಬ್ ಕಿಂಗ್ಸ್ ತಂಡಕ್ಕೂ ಇನ್ನೂ ಎರಡು ಪಂದ್ಯಗಳಿವೆ. ಈ ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದರೆ ಪಂಜಾಬ್ ಪಡೆ ಕೂಡ ಒಟ್ಟು 21 ಅಂಕಗಳನ್ನು ಪಡೆಯಲಿದೆ. ಇದೇ ವೇಳೆ ಉತ್ತಮ ನೆಟ್ ರನ್ ರೇಟ್ ಪಡೆದರೆ, ಪಂಜಾಬ್ ಕಿಂಗ್ಸ್ ತಂಡವು ಆರ್ಸಿಬಿ ತಂಡವನ್ನು ಹಿಂದಿಕ್ಕಿ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಬಹುದು.

ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಕ್ವಾಲಿಫೈಯರ್ ಪಂದ್ಯವಾಡಲು ಅರ್ಹತೆ ಪಡೆಯಬೇಕಿದ್ದರೆ, ಸನ್ರೈಸರ್ಸ್ ಹೈದರಾಬಾದ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಜಯಗಳಿಸಬೇಕು. ಈ ಮೂಲಕ ಉತ್ತಮ ನೆಟ್ ರನ್ ರೇಟ್ನೊಂದಿಗೆ 21 ಅಂಕಗಳನ್ನು ಗಳಿಸಿ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಅಲಂಕರಿಸಬಹುದು. ಅಲ್ಲದೆ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದು ನೇರವಾಗಿ ಫೈನಲ್ಗೆ ಎಂಟ್ರಿ ಕೊಡಬಹುದು. ಹೀಗಾಗಿ ಆರ್ಸಿಬಿ ಪಾಲಿಗೆ ಮುಂದಿನ 2 ಪಂದ್ಯಗಳೂ ಕೂಡ ತುಂಬಾ ಮಹತ್ವದ್ದು ಎನ್ನಬಹುದು.









