IPL 2025: ದೂರದ ಬ್ರಿಸ್ಬೇನ್ನಿಂದ RCB ಅಭಿಮಾನಿಗಳಿಗೆ ಗುಡ್ ನ್ಯೂಸ್
IPL 2025 RCB: ಈ ಬಾರಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈವರೆಗೆ 12 ಪಂದ್ಯಗಳನ್ನಾಡಿದೆ. ಈ ವೇಳೆ 8 ಜಯ ಸಾಧಿಸಿರುವ ಆರ್ಸಿಬಿ ತಂಡವು ಒಟ್ಟು 17 ಅಂಕಗಳನ್ನು ಕಲೆಹಾಕಿದೆ. ಈ ಮೂಲಕ ಪ್ಲೇಆಫ್ ಹಂತಕ್ಕೇರುವಲ್ಲಿ ಯಶಸ್ವಿಯಾಗಿದೆ. ಇನ್ನೂ ಆರ್ಸಿಬಿ ತಂಡಕ್ಕೆ ಎರಡು ಲೀಗ್ ಪಂದ್ಯಗಳು ಬಾಕಿಯಿದ್ದು, ಈ ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಅಂಕ ಪಟ್ಟಿಯಲ್ಲಿ ಮೊದಲ ಅಥವಾ ದ್ವಿತೀಯ ಸ್ಥಾನ ಅಲಂಕರಿಸಬಹುದು.
Updated on: May 20, 2025 | 3:18 PM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪ್ಲೇಆಫ್ಗೆ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಗಳಿಗೆ ಗುಡ್ ನ್ಯೂಸ್. ಆರ್ಸಿಬಿ ತಂಡದ ಪ್ರಮುಖ ಜೋಶ್ ಹೇಝಲ್ವುಡ್ (Josh Hazelwood) ಮತ್ತೆ ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಅದು ಕೂಡ ದೂರದ ಬ್ರಿಸ್ಬೇನ್ನಲ್ಲಿ ಎಂಬುದು ವಿಶೇಷ.

ಅಂದರೆ ಜೋಶ್ ಹೇಝಲ್ವುಡ್ ಇನ್ನೂ ಸಹ ಆರ್ಸಿಬಿ ತಂಡವನ್ನು ಕೂಡಿಕೊಂಡಿಲ್ಲ. ಭುಜದ ನೋವಿನ ಕಾರಣ ಆಸ್ಟ್ರೇಲಿಯಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೇಝಲ್ವುಡ್ ಇದೀಗ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ತಮ್ಮ ಚೇತರಿಕೆ ಪ್ರಕ್ರಿಯೆಯ ಭಾಗವಾಗಿ ಬೌಲಿಂಗ್ ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ.

ವೈದ್ಯಕೀಯ ಮೇಲ್ವಿಚಾರಣೆಯೊಂದಿಗೆ ಬೌಲಿಂಗ್ ಅಭ್ಯಾಸ ಆರಂಭಿಸಿರುವ ಜೋಶ್ ಹೇಝಲ್ವುಡ್ ಅವರ ಫಿಟ್ನೆಸ್ ಬಗ್ಗೆ ಈ ವಾರದೊಳಗೆ ಕ್ರಿಕೆಟ್ ಆಸ್ಟ್ರೇಲಿಯಾಗೆ ಮಾಹಿತಿ ನೀಡುವ ಸಾಧ್ಯತೆಯಿದೆ. ಅವರು ಸಂಪೂರ್ಣ ಫಿಟ್ನೆಸ್ ಸಾಧಿಸಿರುವುದು ಖಚಿತವಾದರೆ, ಮೇ 29 ರೊಳಗೆ ಆರ್ಸಿಬಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಅಂದರೆ ಮೇ 29 ರಿಂದ ಪ್ಲೇಆಫ್ ಪಂದ್ಯಗಳು ಶುರುವಾಗಲಿದ್ದು, ಅದಕ್ಕೂ ಮುನ್ನ ಜೋಶ್ ಹೇಝಲ್ವುಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಆರ್ಸಿಬಿ ತಂಡದ ಪ್ಲೇಆಫ್ ಪಂದ್ಯಗಳಲ್ಲಿ ಹೇಝಲ್ವುಡ್ ಕಣಕ್ಕಿಳಿಯುವುದನ್ನು ನಿರೀಕ್ಷಿಸಬಹುದು.

ಮತ್ತೊಂದೆಡೆ ಆರ್ಸಿಬಿ ತಂಡದ ವೇಗಿ ಲುಂಗಿ ಎನ್ಗಿಡಿ ಪ್ಲೇಆಫ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಹೆಸರಿಸಲಾದ ಸೌತ್ ಆಫ್ರಿಕಾ ತಂಡದಲ್ಲಿ ಲುಂಗಿ ಎನ್ಗಿಡಿ ಸ್ಥಾನ ಪಡೆದಿದ್ದು, ಹೀಗಾಗಿ ಅವರು ಈ ವಾರ ತವರಿಗೆ ಹಿಂತಿರುಗಲಿದ್ದಾರೆ. ಇನ್ನು ಅವರ ಬದಲಿಯಾಗಿ ಆರ್ಸಿಬಿ ಫ್ರಾಂಚೈಸಿ ಝಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿಯನ್ನು ಆಯ್ಕೆ ಮಾಡಿಕೊಂಡಿದೆ.
