ಐಪಿಎಲ್ 2025 ರ 20ನೇ ಪಂದ್ಯ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಏಪ್ರಿಲ್ 7 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಲೀಗ್ನಲ್ಲಿ ಎರಡೂ ತಂಡಗಳು ತಮ್ಮ ಕೊನೆಯಲ್ಲಿ ಪಂದ್ಯದಲ್ಲಿ ಸೋತಿರುವ ಕಾರಣ ಉಭಯ ತಂಡಗಳಿಗೆ ಗೆಲುವಿನ ಅವಶ್ಯಕತೆ ಇದೆ.
ಆರ್ಸಿಬಿಗೆ ಹೋಲಿಸಿದರೆ, ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಉತ್ತಮ ಪ್ರದರ್ಶನ ನೀಡಿಲ್ಲ. ಆಡಿರುವ 4 ಪಂದ್ಯಗಳಲ್ಲಿ ಕೇವಲ 1 ಪಂದ್ಯವನ್ನು ಗೆದ್ದಿರುವ ಮುಂಬೈ ಉಳಿದ 3 ಪಂದ್ಯಗಳಲ್ಲೂ ಹೀನಾಯವಾಗಿ ಸೋತಿದೆ. ಈ ಆವೃತ್ತಿಯಲ್ಲಿ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲು ವೈಫಲ್ಯ ಅನುಭವಿಸುತ್ತಿರುವುದು ಸತತ ಸೋಲಿಗೆ ಕಾರಣವಾಗಿದೆ.
ಈ ಸತತ ಸೋಲುಗಳ ನಡುವೆ ಮುಂಬೈಗೆ ಸಂತಸದ ಸುದ್ದಿ ಸಿಕ್ಕಿದ್ದು, ತಂಡದ ಇಬ್ಬರು ಮ್ಯಾಚ್ ವಿನ್ನಿಂಗ್ ಪ್ಲೇಯರ್ಸ್ ಇಂಜುರಿಯಿಂದ ಚೇತರಿಸಿಕೊಂಡಿದ್ದು, ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆ ಇಬ್ಬರು ಆಟಗಾರರೆಂದರೆ ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ.
ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಮಹೇಲ ಜಯವರ್ಧನೆ, ಬುಮ್ರಾ ಅವರ ಮರಳುವಿಕೆಯನ್ನು ದೃಢಪಡಿಸಿದ್ದು, ‘ಹೌದು, ಮುಂದಿನ ಪಂದ್ಯದಿಂದ ಬುಮ್ರಾ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಅಭ್ಯಾಸ ಮಾಡುತ್ತಿದ್ದು, ಸೋಮವಾರದ ಪಂದ್ಯದಲ್ಲಿ ಆಡಲು ಸಿದ್ಧರಾಗಿದ್ದಾರೆ ಎಂದರು.
ಬುಮ್ರಾ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿರುವುದು ತಂಡದ ಬೌಲಿಂಗ್ ವಿಭಾಗಕ್ಕೆ ಆನೆ ಬಲ ತಂದಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಬೌಲಿಂಗ್ ವಿಭಾಗವೇ ಹೆಚ್ಚು ದುರ್ಬಲವಾಗಿ ಕಾಣುತ್ತಿತ್ತು. ಆದರೀಗ ಬುಮ್ರಾ ಮುಂಬೈ ಇಂಡಿಯನ್ಸ್‌ಗೆ ಮರಳುವುದರೊಂದಿಗೆ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಲಿದೆ.
ಹಿಂದಿನ ಪಂದ್ಯದಲ್ಲಿ ಮೊಣಕಾಲಿನ ಗಾಯದಿಂದ ವಿಶ್ರಾಂತಿ ಪಡೆದಿದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಕಂಡುಬಂದಿತು. ಕೋಚ್ ಜಯವರ್ಧನೆ ಮಾತನಾಡಿ, ‘ರೋಹಿತ್ ಆರೋಗ್ಯವಾಗಿದ್ದಾರೆ. ಅವರು ಇಂದು ಬ್ಯಾಟಿಂಗ್ ಮಾಡಲಿದ್ದಾರೆ. ಆ ನಂತರ ನಾವು ಅವರ ಸ್ಥಿತಿಯನ್ನು ನಿರ್ಣಯಿಸುತ್ತೇವೆ ಎಂದಿದ್ದಾರೆ.