
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆದರೆ ಈ ಚಾಂಪಿಯನ್ ಪಟ್ಟವು ಅಂತಿಂಥ ಗೆಲುವಿನಿಂದ ದಕ್ಕಿದ್ದಲ್ಲ. ಬದಲಾಗಿ ದಾಖಲೆಯ ವಿಜಯದೊಂದಿಗೆ ಮೂಡಿಬಂದಿದೆ. ಅಂದರೆ ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ರೀತಿ ಯಾವುದೇ ತಂಡ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿಲ್ಲ.

ಏಕೆಂದರೆ ಈ ಬಾರಿಯ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಟ್ಟು 16 ಪಂದ್ಯಗಳನ್ನಾಡಿದೆ. ಈ 16 ಮ್ಯಾಚ್ಗಳಲ್ಲಿ ಸೋತಿರುವುದು ಕೇವಲ 4 ಪಂದ್ಯಗಳನ್ನು ಮಾತ್ರ. ಅದರಲ್ಲಿ 9 ಪಂದ್ಯಗಳನ್ನು ಅವೇ ಮೈದಾನದಲ್ಲಿ ಗೆದುಕೊಂಡಿದೆ. ಅಂದರೆ ಬೆಂಗಳೂರಿನ ಹೊರಗೆ ಆರ್ಸಿಬಿ ಸತತ 9 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ.

ಐಪಿಎಲ್ ಸೀಸನ್ವೊಂದರಲ್ಲಿ ತವರಿನ ಹೊರಗೆ ಸತತ 9 ಪಂದ್ಯಗಳನ್ನು ಗೆದ್ದು ಟ್ರೋಫಿ ಎತ್ತಿ ಹಿಡಿದ ಮತ್ತೊಂದು ತಂಡವಿಲ್ಲ. ಅಂದರೆ ಆರ್ಸಿಬಿ ತಂಡವು ಐಪಿಎಲ್ನಲ್ಲಿ ಈವರೆಗೆ ಯಾರಿಂದಲೂ ಕೂಡ ಸಾಧ್ಯವಾಗದ ಗೆಲುವಿನ ನಾಗಾಲೋಟದೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಎದುರಾಳಿ ತಂಡಗಳ ತವರು ಮೈದಾನದಲ್ಲಿ 7 ಜಯ ಹಾಗೂ ತವರಿನ ಹೊರಗೆ ನಡೆದ ಪ್ಲೇಆಫ್ ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಐಪಿಎಲ್ ಟ್ರೋಫಿ ಗೆದ್ದ ಏಕೈಕ ತಂಡವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊರಹೊಮ್ಮಿದೆ. ಅದು ಕೂಡ 17 ವರ್ಷಗಳ ಕಾಯುವಿಕೆಯ ಬಳಿಕ ಎಂಬುದು ವಿಶೇಷ.

ಇನ್ನು ಅಹಮದಾಬಾದ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್ಗಳಲ್ಲಿ 190 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 184 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ 6 ರನ್ಗಳ ರೋಚಕ ಜಯ ಸಾಧಿಸಿ ಆರ್ಸಿಬಿ ಚೊಚ್ಚಲ ಬಾರಿ ಟ್ರೋಫಿ ಎತ್ತಿ ಹಿಡಿದಿದೆ.